ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯಲ್ಲಿ ಕಳೆದ 6 ದಿನಗಳಿಂದ ತ್ರಿಪುರದ ಯುವತಿಯೊಬ್ಬಳು ನಾಪತ್ತೆಯಾಗಿದ್ದಾಳೆ.
ದೆಹಲಿಯ (Delhi) ಆತ್ಮ ರಾಮ ಸನಾತನ ಧರ್ಮ ಕಾಲೇಜಿನ ವಿದ್ಯಾರ್ಥಿನಿ ಸ್ನೇಹಾ ದೇಬ್ನಾಥ್ (19) ಕಳೆದ 6 ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. ಜು.7ರಂದು ಕೊನೆಯ ಬಾರಿ ಪೋಷಕರಿಗೆ ಕರೆ ಮಾಡಿ ಮಾತನಾಡಿದ್ದಳು. ಬೆಳಗ್ಗೆ 5:56ಕ್ಕೆ ತನ್ನ ಸ್ನೇಹಿತೆ ಪಿಟುನಿಯಾ ಜೊತೆ ಸರೈ ರೋಹಿಲ್ಲಾ ನಿಲ್ದಾಣಕ್ಕೆ ಹೋಗುವುದಾಗಿ ತಿಳಿಸಿದ್ದಳು. ಇದಾದ ನಂತರ ಪೋಷಕರು 8 ಗಂಟೆಗೆ ಕರೆ ಮಾಡಿದಾಗ ಸ್ನೇಹಾ ಫೋನ್ ಸ್ವಿಚ್ ಆಫ್ ಆಗಿತ್ತು. ಗಾಬರಿಗೊಂಡಿದ್ದ ಪೋಷಕರು ಆಕೆಯ ಸ್ನೇಹಿತೆ ಪಿಟುನಿಯಾಳನ್ನು ಸಂಪರ್ಕಿಸಿದ್ದರು. ಸ್ನೇಹಾಳನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಳು ಎನ್ನಲಾಗಿದೆ.
ಸ್ನೇಹಾ ಪೋಷಕರು, ಕ್ಯಾಬ್ ಚಾಲಕನನ್ನು ಪತ್ತೆಹಚ್ಚಿ, ಮಗಳ ಚಲನವಲನದ ಮಾಹಿತಿ ಪಡೆದಿದ್ದರು. ಈ ವೇಳೆ ಸ್ನೇಹಾಳನ್ನು ದೆಹಲಿಯ ಸಿಗ್ನೇಚರ್ ಸೇತುವೆಯ ಬಳಿ ಬಿಟ್ಟಿರುವುದಾಗಿ ಮಾಹಿತಿ ನೀಡಿದ್ದ. ಬಳಿಕ ದೆಹಲಿ ಪೊಲೀಸರು ಪಕ್ಕದಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಪರಿಶೀಲಿಸಿದಾಗ ಆಕೆಯ ದೃಶ್ಯ ಸರಿಯಾಗಿ ಗೋಚರವಾಗಿಲ್ಲ.
ಇದರಿಂದ ಸಂಶಯಗೊಂಡ ಪೊಲೀಸರು ಸೇತುವೆಯ ಬಳಿ ಶೋಧ ಕಾರ್ಯ ನಡೆಸಿದ್ದರು. ಸತತ ಒಂದು ವಾರಗಳ ಕಾಲ ಹುಡುಕಾಡಿದರೂ ಸ್ನೇಹಾ ಪತ್ತೆಯಾಗಿಲಿಲ್ಲ.
ಘಟನೆ ಕುರಿತು ಯುವತಿ ಪೋಷಕರು ತ್ರಿಪುರ ಸಿಎಂ ಮಾಣಿಕ್ ಸಹಾ ಅವರಿಗೆ ಮಾಹಿತಿ ನೀಡಿದ್ದಾರೆ. ಮಾಣಿಕ್ ಸಹಾ ಅವರು ಸ್ನೇಹಾ ಪತ್ತೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.