ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಲಂಕಾ ವಿರುದ್ಧದ ಟಿ-20 ಸರಣಿಯಲ್ಲಿ ಗೆದ್ದು ಬೀಗಿದ ಟೀಮ್ ಇಂಡಿಯಾ ಏಕದಿನ ಸರಣಿಯಲ್ಲಿ ಸಂಪೂರ್ಣ ಎಡವಿದ್ದು, ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗವನ್ನು 110 ರನ್‌ಗಳಿಂದ ಮಣಿಸುವ ಮೂಲಕ ಶ್ರೀಲಂಕಾ 27 ವರ್ಷಗಳ ಬಳಿಕ ಭಾರತದ ವಿರುದ್ಧ ಗೆದ್ದು ಸಂಭ್ರಮಿಸಿದೆ.
ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ.
ಶ್ರೀಲಂಕಾ ನೀಡಿದ 249 ರನ್‌ಗಳ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಭಾರತ ತಂಡವು 26.1 ಓವರ್‌ಗಳಲ್ಲಿ 138 ರನ್‌ಗಳಿಸಿ ಆಲೌಟ್ ಆಗುವ ಮೂಲಕ 110 ರನ್‌ಗಳಿಂದ ಸೋಲನುಭವಿಸಿತು.
ಭಾರತದ ಪರ ರೋಹಿತ್ ಶರ್ಮಾ (35) ರನ್ ಗಳಿಸಿದ್ದು ಬಿಟ್ಟರೆ, ಉಳಿದ ಯಾವೊಬ್ಬ ಆಟಗಾರನೂ ನೆಲಕಚ್ಚಿ ಆಡಲಿಲ್ಲ. ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಕೂಡ ಭಾರತ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಲಿಲ್ಲ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ, ಭರ್ಜರಿ ಆರಂಭ ಪಡೆಯಿತು. ಪಥುಮ್ ನಿಸಂಕಾ (45), ಆವಿಷ್ಕ ಫರ್ನಾಂಡೋ (96) ಹಾಗೂ ಕುಶಾಲ್ ಮೆಂಡಿಸ್ (59) ರನ್‌ಗಳ ನೆರವಿನಿಂದ 7 ವಿಕೆಟ್ ಕಳೆದುಕೊಂಡು 248 ರನ್ ಗಳಿಸಿತ್ತು.