ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾರಿಗೆ ಟ್ರಕ್ ಡಿಕ್ಕಿ ಹೊಡೆದು, ಕಾರಿನಲ್ಲಿದ್ದ ಇಬ್ಬರು ಬಿಜೆಪಿ ನಾಯಕರು ಸಾವಿಗೀಡಾಗಿರುವ ಘಟನೆ ಒಡಿಶಾದ ಸಂಬಲ್‌ಪುರ್ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ದೇಬೇಂದ್ರ ನಾಯಕ್ ಮತ್ತು ಮುರಳೀಧರ್ ಚುರಿಯಾ ಎಂದು ಗುರುತಿಸಲಾಗಿದೆ. ನಾಯಕ್ ಬಿಜೆಪಿಯ ಗೋಶಾಲಾ ಮಂಡಲ ಅಧ್ಯಕ್ಷರಾಗಿದ್ದರೆ, ಚುರಿಯಾ ಮಾಜಿ ಸರಪಂಚ್ ಆಗಿದ್ದರು. ಇವರಿಬ್ಬರೂ ಬಿಜೆಪಿಯ ಹಿರಿಯ ನಾಯಕಿ ನೌರಿ ನಾಯ್ಕ್‌ಗೆ ಆಪ್ತರಾಗಿದ್ದರು.
ಎನ್‌ಎಚ್ 53ನಲ್ಲಿ ಮುಂಜಾನೆ 1:30 ರ ಸುಮಾರಿಗೆ ಈ ಘಟನೆ ನಡೆದಿದೆ. ಕಾರಿನಲ್ಲಿ ಚಾಲಕ ಸೇರಿದಂತೆ ಆರು ಜನರಿದ್ದರು. ಭುವನೇಶ್ವರದಿಂದ ಕಾರ್ಡೋಲಾದಲ್ಲಿ ಮನೆಗೆ ಮರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್ಲಾ ಆರು ಜನರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. ಗಾಯಾಳುಗಳು ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.