ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕಾ ಅಧ್ಯಕ್ಷರಾಗಿ ಡೋನಾಲ್ಡ್ ಟ್ರಂಪ್ ಆಯ್ಕೆಯಾದ ನಂತರ ಅಕ್ರಮ ವಲಸಿಗರ ವಿರುದ್ಧ ತಿರುಗಿ ಬಿದ್ದಿದ್ದು, ಬ್ರೆಜಿಲಿಯನ್ ಮೂಲದ ಅಕ್ರಮ ವಲಸಿಗರನ್ನು ಟ್ರಂಪ್ ದೇಶದಿಂದ ಹೊರ ಹಾಕಿದ್ದಾರೆ.
ಅಮೆರಿಕದಿಂದ ಬ್ರೆಜಿಲ್‌ಗೆ ಗಡೀಪಾರು ಮಾಡಲ್ಪಟ್ಟ ಡಜನ್‌ಗಟ್ಟಲೇ ವಲಸಿಗರ ಕೈಗೆ ಕೈಕೋಳ ಹಾಕಲಾಗಿತ್ತು. ಇದನ್ನು ನೋಡಿದ ಬ್ರೆಜಿಲ್ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಡೊನಾಲ್ಡ್ ಟ್ರಂಪ್ ಆಡಳಿತದಿಂದ ಈ ನಡೆಗೆ ಸಂಬಂಧಿಸಿದಂತೆ ವಿವರ ಕೇಳುವುದಾಗಿ ಹೇಳಿದೆ.
ಅಮೆರಿಕ ವಲಸಿಗರನ್ನು ನಡೆಸಿಕೊಂಡ ರೀತಿ ಮಾನವ ಹಕ್ಕುಗಳ ‘ಸ್ಪಷ್ಟ ಉಲ್ಲಂಘನೆ ಎಂದು ಬ್ರೆಜಿಲ್ ವಿದೇಶಾಂಗ ಸಚಿವಾಲಯ ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ವಲಸೆ ವಿರೋಧಿ ನೀತಿಯ ವಿರುದ್ಧ ಲ್ಯಾಟಿನ್ ಅಮೆರಿಕ ಸೆಣಸಾಡುತ್ತಿರುವಾಗಲೇ ಈ ವಿವಾದ ಉದ್ಭವಿಸಿದೆ. ಒಂದು ವಾರದ ಹಿಂದೆ ಅಧಿಕಾರಕ್ಕೆ ಬಂದ ಟ್ರಂಪ್ ಅಮೆರಿಕಾಗೆ ಅನಿಯಮಿತ ವಲಸೆ ಮತ್ತು ಸಾಮೂಹಿಕ ಗಡೀಪಾರುಗಳ ವಿರುದ್ಧ ಕಠಿಣ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಹೀಗಾಗಿ ಹಲವಾರು ವಿಮಾನಗಳು ಗ್ವಾಟೆಮಾಲಾ ಮತ್ತು ಬ್ರೆಜಿಲ್‌ನಂತಹ ವಿವಿಧ ದೇಶಗಳಿಗೆ ಅಕ್ರಮ ವಲಸಿಗರನ್ನು ಕರೆ ತರುತ್ತಿವೆ.
ಅಂತಹ ಒಂದು ವಿಮಾನ ಬ್ರೆಜಿಲ್‌ನ ಉತ್ತರ ನಗರವಾದ ಮನೌಸ್‌ನಲ್ಲಿ ಇಳಿದಾಗ ವಿಮಾನದಲ್ಲಿದ್ದ 88 ಬ್ರೆಜಿಲಿಯನ್ನರು ಕೈಕೋಳ ಹೊಂದಿದ್ದರು ಎಂಬುದನ್ನು ನೋಡಿ ಅಲ್ಲಿನ ಅಧಿಕಾರಿಗಳು ಅಚ್ಚರಿಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ವಲಸಿಗರ ಕೈಯಿಂದ ತಕ್ಷಣವೇ ಕೈಕೋಳವನ್ನು ತೆಗೆದುಹಾಕುವಂತೆ ಅಮೆರಿಕದ ಅಧಿಕಾರಿಗಳಿಗೆ ಬ್ರೆಜಿಲ್ ಅಧಿಕಾರಿಗಳು ಆದೇಶಿಸಿದರು ಎಂದು ಬ್ರೆಜಿಲ್‌ನ ನ್ಯಾಯ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬ್ರೆಜಿಲ್ ಕಾನೂನು ಸಚಿವ ರಿಕಾರ್ಡೊ ಲೆವಾಂಡೋವ್ಸ್ಕಿ ಅವರು ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರಿಗೆ ಬ್ರೆಜಿಲ್ ನಾಗರಿಕರ ಮೂಲಭೂತ ಹಕ್ಕುಗಳ ಬಗ್ಗೆ ಅಮೆರಿಕಾ ಸ್ಪಷ್ಟವಾದ ನಿರ್ಲಕ್ಷ್ಯ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ. ಶುಕ್ರವಾರ ರಾತ್ರಿ ಬಂದ ವಿಮಾನದಲ್ಲಿ ಪ್ರಯಾಣಿಕರನ್ನು ಅವಮಾನಕರವಾಗಿ ನಡೆಸಿಕೊಳ್ಳಲಾಗಿದ್ದು, ಈ ಬಗ್ಗೆ ಅಮೆರಿಕ ಸರ್ಕಾರದಿಂದ ವಿವರಣೆಗಳನ್ನು ಬ್ರೆಜಿಲ್ ಕೋರಲಿದೆ ಎಂದು ಬ್ರೆಜಿಲ್‌ನ ವಿದೇಶಾಂಗ ಸಚಿವಾಲಯ ಟ್ವಿಟ್ಟರ್‌ನಲ್ಲಿ ಹೇಳಿದೆ.
ವಿಮಾನದಲ್ಲಿದ್ದ ಬ್ರೆಜಿಲಿಯನ್ನರಲ್ಲಿ ಒಬ್ಬರಾದ 31 ವರ್ಷದ ಕಂಪ್ಯೂಟರ್ ತಂತ್ರಜ್ಞ ಎಡ್ಗರ್ ಡಾ ಸಿಲ್ವಾ ಮೌರಾ, ತನ್ನನ್ನು ಗಡೀಪಾರು ಮಾಡುವ ಮೊದಲು, ಏಳು ತಿಂಗಳ ಕಾಲ ಅಮೆರಿಕದಲ್ಲಿ ಬಂಧನದಲ್ಲಿಡಲಾಗಿತ್ತು ಎಂದಿದ್ದಾರೆ. ವಿಮಾನದಲ್ಲಿ, ಅವರು ನಮಗೆ ನೀರು ಕೊಡಲಿಲ್ಲ, ನಮ್ಮ ಕೈಕಾಲುಗಳನ್ನು ಕಟ್ಟಲಾಗಿತ್ತು, ಅವರು ನಮ್ಮನ್ನು ಬಾತ್‌ರೂಮ್‌ಗೂ ಹೋಗಲು ಬಿಡಲಿಲ್ಲಎಂದು ಅವರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಅತ್ತ ವಿಮಾನದಲ್ಲಿ ಬಹಳ ಬಿಸಿ ಇತ್ತು, ಕೆಲವು ಮಂದಿ ತಲೆತಿರುಗಿ ಬಿದ್ದರು ಎಂದು ಅವರು ವಿವರಿಸಿದ್ದಾರೆ.
ವಿಮಾನದಲ್ಲಿದ್ದ21 ವರ್ಷದ ಲೂಯಿಸ್ ಆಂಟೋನಿಯೊ ರೊಡ್ರಿಗಸ್ ಸ್ಯಾಂಟೋಸ್ ಮಾತನಾಡಿ, ವಿಮಾನದಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ ಏಸಿ ಇಲ್ಲದೇ ಉಸಿರಾಟದ ತೊಂದರೆಯಿಂದ ಬಳಲಿದ್ದಾಗಿ ಹೇಳಿದ್ದಾರೆ. ಟ್ರಂಪ್ ಬಂದಾಗಿನಿಂದ ವಿಚಾರಗಳು ಬದಲಾಗಿದ್ದು, ವಲಸಿಗರನ್ನು ಅಪರಾಧಿಗಳಂತೆ ನೋಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. .
ಆದರೆ ಅಮೆರಿಕಾದ ಸರ್ಕಾರಿ ಮೂಲವೊಂದು ಗಡೀಪಾರು ವಿಮಾನವು ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ಹೊರಡಿಸಿದ ಯಾವುದೇ ವಲಸೆ ಆದೇಶಗಳಿಗೆ ನೇರವಾಗಿ ಸಂಬಂಧಿಸಿಲ್ಲ, ಬದಲಿಗೆ 2017 ರ ದ್ವಿಪಕ್ಷೀಯ ಒಪ್ಪಂದದಿಂದ ಹುಟ್ಟಿಕೊಂಡಿದೆ ಎಂದು ಸುದ್ದಿಸಂಸ್ಥೆಗೆ ಹೇಳಿದೆ.
ಬ್ರೆಜಿಲ್‌ನ ಮಾನವ ಹಕ್ಕುಗಳ ಸಚಿವೆ ಮಕೇ ಎವರಿಸ್ಟೊ ಮಾಹಿತಿ ನೀಡುತ್ತಾ, ಆಟಿಸಂ ಹೊಂದಿರುವ ಮಕ್ಕಳು ಕೂಡ ಈ ವಿಮಾನದಲ್ಲಿದ್ದು, ಬಹಳ ಗಂಭೀರವಾದ ಅನುಭವಗಳನ್ನು ಅನುಭವಿಸಿದವರು ಎಂದಿದ್ದಾರೆ. ಬ್ರೆಜಿಲಿಯನ್ ಟಿವಿಯೊಂದು ಕೈಕೋಳದೊಂದಿಗೆ ಕೆಲವು ಪ್ರಯಾಣಿಕರು ನಾಗರಿಕ ವಿಮಾನದಿಂದ ಇಳಿಯುವುದನ್ನು ತೋರಿಸಿವೆ. ಅವರ ಕಾಲುಗಂಟಿಗೂ ಸಂಕೋಲೆ ಹಾಕಲಾಗಿತ್ತು. ಪರಿಸ್ಥಿತಿಯ ಬಗ್ಗೆ ತಿಳಿದ ನಂತರ, ಅಧ್ಯಕ್ಷ ಲೂಲಾ ಅವರು ಬ್ರೆಜಿಲಿಯನ್ನರನ್ನು ಘನತೆ ಮತ್ತು ಸುರಕ್ಷತೆಯಿಂದ ಕರೆತರಲು ಬ್ರೆಜಿಲಿಯನ್ ವಾಯುಪಡೆಯ (ಎಫ್‌ಎಬಿ) ವಿಮಾನವನ್ನು ಸಜ್ಜುಗೊಳಿಸುವಂತೆ ಆದೇಶಿಸಿದ್ದಾರೆ .