ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಿದ್ದಾರೆ. ಇದೇ ವೇಳೆ ಅಮೆರಿಕನ್ನರ ಏಳಿಗೆಗಾಗಿ ವಿದೇಶಗಳಿಗೆ ತೆರಿಗೆ ವಿಧಿಸುವ ಮಹತ್ವದ ಘೋಷಣೆ ಮಾಡಿರುವ ಟ್ರಂಪ್ 80 ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದಾರೆ.
ಸೋಮವಾರವಷ್ಟೇ ಅಧಿಕಾರ ವಹಿಸಿಕೊಂಡ ಟ್ರಂಪ್, ವಿಶೇಷ ಅಧಿಕಾರ ಬಳಸಿ 2021ರಲ್ಲಿ ನಡೆದ ವಾಷಿಂಗ್ಟನ್ ಗಲಭೆ ಪ್ರಕರಣದ ಆರೋಪಿಗಳಿಗೆ ಕ್ಷಮಾದಾನ ನೀಡಿದ್ದಾರೆ. ಮಹತ್ವದ ಆದೇಶಗಳಿಗೆ ಸಹಿ ಹಾಕುವ ಮುನ್ನವೇ ಜೋ ಬೈಡನ್ ಅವರ ಅವಧಿಯಲ್ಲಿ ತೆಗೆದುಕೊಳ್ಳಲಾದ 80 ವಿನಾಶಕಾರಿ ಕ್ರಮಗಳನ್ನು ಹಿಂಪಡೆಯುವುದಾಗಿ ಟ್ರಂಪ್ ಗುಡುಗಿದ್ದಾರೆ.
ಅಮೆರಿಕದ ದಕ್ಷಿಣ ಗಡಿಯಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ ಮಾಡುವುದು. ಮೆಕ್ಸಿಕೋ ಗಡಿಗೆ ಸೇನೆ ಕಳುಹಿಸುವುದು ನಮ್ಮ ಆದ್ಯತೆ ಆಗಿದೆ. ಅಲ್ಲದೇ ಅಮೆರಿಕ ಪ್ರವೇಶಿಸುತ್ತಿರುವ ಅಕ್ರಮ ವಲಸಿಗರನ್ನು ಸಂಪೂರ್ಣವಾಗಿ ತಡೆಯುವುದು. ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನ ದೇಶದಿಂದ ಹೊರಹಾಕುವುದು ಆದ್ಯತೆಯಾಗಿದೆ. ಅಲ್ಲದೇ ಅಮೆರಿಕ ಗಡಿಯುದ್ಧಕ್ಕೂ ಸೇನೆ ನಿಯೋಜಿಸಲು ತಕ್ಷಣ ಆದೇಶ ಹೊರಡಿಸುತ್ತೇನೆ ಎಂಬುದಾಗಿಯೂ ಟ್ರಂಪ್ ಘೋಷಿಸಿದ್ದಾರೆ.
ಅಷ್ಟೇ ಅಲ್ಲದೇ ಪಳೆಯುಳಿಕೆ ಇಂಧನ ಉತ್ಪಾದನೆಯನ್ನು ಹೆಚ್ಚಿಸುವುದು, ಪರಿಸರ ನಿಯಮಗಳನ್ನು 2021ರ ಪ್ಯಾರಿಸ್ ಹವಾಮಾನ ಒಪ್ಪಂದವನ್ನು ಹಿಂತೆಗೆದುಕೊಳ್ಳುವ ಪ್ರಮುಖ ಆದೇಶಗಳಿಗೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ.
ಫೆಡರಲ್ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಕೊನೆಗೊಳಿಸುವ ಆದೇಶವನ್ನು ಟ್ರಂಪ್ ಮೊದಲು ಪ್ರಕಟಿಸಿದ್ದಾರೆ. ಸರ್ಕಾರದ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಏಜೆನ್ಸಿ ಮುಖ್ಯಸ್ಥರು, ವಿಭಾಗಗಳು ಆದಷ್ಟು ಬೇಗ ವರ್ಕ್ ಫ್ರಮ್ ಹೋಮ್ ನಿಯಮವನ್ನು ಹಿಂತೆಗೆದುಕೊಳ್ಳಬೇಕು. ಅಗತ್ಯಬಿದ್ದಲ್ಲಿ ಆಯಾ ಏಜೆನ್ಸಿ, ಇಲಾಖೆ ಮುಖ್ಯಸ್ಥರು ವಿನಾಯಿತಿ ನೀಡಲಿದ್ದಾರೆ ಎಂದು ಟ್ರಂಪ್ ಕಾರ್ಯಾದೇಶದಲ್ಲಿ ತಿಳಿಸಿದ್ದಾರೆ.