ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ತಯಾರಿಸಲಾದ ಆ್ಯಪಲ್ ಫೋನ್ಗಳ ಮೇಲೆ ಶೇ. 25ರಷ್ಟು ತೆರಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಭಾರತ ಮಾತ್ರವಲ್ಲ, ಅಮೆರಿಕ ಬಿಟ್ಟು ಬೇರೆಲ್ಲೇ ತಯಾರಿಸಿದರೂ 25 ಪ್ರತಿಶತದಷ್ಟು ಆಮದು ಸುಂಕ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಎಕ್ಸ್ನಲ್ಲೂ ಟ್ರಂಪ್ ಈ ವಿಚಾರ ಪ್ರಕಟಿಸಿದ್ದಾರೆ. ‘ಅಮೆರಿಕದಲ್ಲಿ ಮಾರಾಟವಾಗುವ ಐಫೋನ್ಗಳು ಅಮೆರಿಕದಲ್ಲೇ ತಯಾರಾಗಬೇಕು. ಭಾರತದಲ್ಲಾಗಲೀ ಮತ್ತೆಲ್ಲಿಯಾಗಲೀ ಅದು ತಯಾರಾಗಿದ್ದರೆ ಆ್ಯಪಲ್ ಕಂಪನಿಯು ಅಮೆರಿಕಕ್ಕೆ ಕನಿಷ್ಠ ಶೇ. 25ರಷ್ಟು ಟ್ಯಾರಿಫ್ ಕಟ್ಟಬೇಕಾಗುತ್ತದೆ’ ಎಂದು ಪೋಸ್ಟ್ನಲ್ಲಿ ಹೇಳಿದ್ದಾರೆ.
ಈ ಹಿಂದೆಯೂ ಅಮೆರಿಕ ಅಧ್ಯಕ್ಷರು ಆ್ಯಪಲ್ನ ಐಫೋನ್ ವಿಚಾರವಾಗಿ ತಮ್ಮ ಈ ನಿಲುವನ್ನು ಅನೇಕ ಬಾರಿ ಜಾಹೀರುಗೊಳಿಸಿದ್ದಿದೆ. ಹೀಗಾಗಿ, ಅವರ ಈ ಹೇಳಿಕೆ ಅನಿರೀಕ್ಷಿತವಲ್ಲ. ಆದಾಗ್ಯೂ ಕೂಡ ಆ್ಯಪಲ್ ಕಂಪನಿ ಭಾರತದಲ್ಲಿ ಹೂಡಿಕೆ ಮಾಡುವ ಅಚಲ ನಿಲುವನ್ನು ಮುಂದುವರಿಸಿದೆ.
ಅಮೆರಿಕದಲ್ಲಿ ಮ್ಯಾನುಫ್ಯಾಕ್ಚರಿಂಗ್ ಉದ್ಯಮ ಬೆಳೆಯಬೇಕು, ಉದ್ಯೋಗ ಸೃಷ್ಟಿ ಅಧಿಕ ಆಗಬೇಕು. ಇದು ಡೊನಾಲ್ಡ್ ಟ್ರಂಪ್ ಅವರ ಉದ್ದೇಶ. ಈ ನಿಟ್ಟಿನಲ್ಲಿ ಅವರು ಐಫೋನ್ ತಯಾರಿಕೆಯನ್ನು ಅಮೆರಿಕಕ್ಕೆ ತರಲು ಹರಸಾಹಸ ನಡೆಸುತ್ತಿದ್ದಾರೆ. ಅಮೆರಿಕದಲ್ಲಿ ಫೋನ್ ತಯಾರಿಸುವುದಾದರೆ ಕಾರ್ಮಿಕ ವೆಚ್ಚ ಅಧಿಕವಾಗುತ್ತದೆ. ಈ ಕಾರಣಕ್ಕೆ ಆ್ಯಪಲ್ ಕಂಪನಿಯು ತನ್ನ ಉತ್ಪನ್ನಗಳ ತಯಾರಿಕೆಯನ್ನು ಚೀನಾದಲ್ಲಿ ಮಾಡುತ್ತಿತ್ತು. 2020ರ ಬಳಿಕ ಚೀನಾದಿಂದ ಆಚೆ ತಯಾರಿಕಾ ಕಾರ್ಯವನ್ನು ವಿಸ್ತರಿಸುತ್ತಿದೆ. ಇದರಲ್ಲಿ ಭಾರತವನ್ನು ಪ್ರಮುಖವಾಗಿ ಆಯ್ದುಕೊಂಡಿದೆ.