ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾ ತಾನು ಹಾಕಿದ ಪ್ರತೀಕಾರದ ತೆರಿಗೆ ಹಿಂಪಡೆಯದಿದ್ದರೆ ಆ ರಾಷ್ಟ್ರದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಎಚ್ಚರಿಕೆ ಸಂದೇಶ ನೀಡಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಟ್ರಂಪ್, ನಾಳೆ ಅಂದರೆ ಏಪ್ರಿಲ್ 8, 2025 ರೊಳಗೆ ಚೀನಾವು ಶೇ. 34 ರಷ್ಟು ಪ್ರತೀಕಾರದ ತೆರಿಗೆಯನ್ನು ಹಿಂತೆಗೆದುಕೊಳ್ಳದಿದ್ದರೆ, ಅಮೆರಿಕ ಚೀನಾದ ಮೇಲೆ ಶೇ. 50 ರಷ್ಟು ಹೆಚ್ಚುವರಿ ಸುಂಕಗಳನ್ನು ವಿಧಿಸುತ್ತದೆ. ಇದು ಏಪ್ರಿಲ್ 9 ರಿಂದ ಜಾರಿಗೆ ಬರುತ್ತದೆ ಎಂದು ಹೇಳಿದ್ದಾರೆ.
ಕಳೆದ ವಾರ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯ ಸರಕುಗಳ ಮೇಲೆ ಟ್ರಂಪ್ ಸುಂಕ ಹೆಚ್ಚಳವನ್ನು ಘೋಷಿಸಿದ ನಂತರ ಚೀನಾ ಪ್ರತೀಕಾರದ ಕ್ರಮ ತೆಗೆದುಕೊಂಡಿತ್ತು.
ಚೀನಾದಿಂದ ಆಮದಾಗುವ ಸರಕುಗಳ ಮೇಲೆ ಶೇ. 20 ರಷ್ಟು ಸುಂಕ ಘೋಷಿಸಿದ್ದ ಟ್ರಂಪ್, ಬುಧವಾರದಿಂದ ಶೇ. 34 ರಷ್ಟು ತೆರಿಗೆ ವಿಧಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಚೀನಾ ಕೂಡಾ ಅಮೆರಿಕ ಸರಕುಗಳ ಮೇಲೆ ತೆರಿಗೆ ವಿಧಿಸಿದ್ದು, ಏಪ್ರಿಲ್ 10 ರಂದು ಜಾರಿಗೆ ತರಲು ನಿರ್ಧರಿಸಿದೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಚೀನಾದ ತೆರಿಗೆ ನೀತಿಯನ್ನು ಟೀಕಿಸಿರುವ ಟ್ರಂಪ್, ಚೀನಾದೊಂದಿಗಿನ ಎಲ್ಲಾ ಮಾತುಕತೆಗಳನ್ನು ಕೊನೆಗೊಳಿಸಲಾಗುವುದು. ಆದರೆ ‘ಬೇರೆ ದೇಶಗಳೊಂದಿಗೆ ಮಾತುಕತೆ, ಸಭೆಯನ್ನು ತಕ್ಷಣವೇ ಪ್ರಾರಂಭಿಸುತ್ತವೆ’ ಎಂದು ಬರೆದುಕೊಂಡಿದ್ದಾರೆ.