ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ ಅವರು ತಮ್ಮ ಪತ್ನಿ ಮತ್ತು ಉನ್ನತ ವಿಐಪಿ ತಂಡದೊಂದಿಗೆ ಇಂದು ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್‌ಗೆ ಭೇಟಿ ನೀಡಿದರು.
ಇದು ಟ್ರಂಪ್ ಜೂನಿಯರ್ ಅವರ ತಾಜ್ ಮಹಲ್‌ಗೆ ಎರಡನೇ ಭೇಟಿಯಾಗಿದ್ದು, ಈ ಹಿಂದೆ 2018ರಲ್ಲಿ ಅವರು ಆಗ್ರಾಕ್ಕೆ ಆಗಮಿಸಿದ್ದರು.
ತಮ್ಮ ಪ್ರವಾಸದ ಭಾಗವಾಗಿ ಇಂದು ಮುಂಜಾನೆ ಆಗ್ರಾಗೆ ಬಂದಿಳಿದ ಅವರು, ಬೃಹತ್ ಭದ್ರತಾ ವ್ಯವಸ್ಥೆಯ ನಡುವೆ ಮೊಘಲರ ಈ ಭವ್ಯ ಸ್ಮಾರಕವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಜೂನಿಯರ್ ಅವರು ತಮ್ಮ ಪತ್ನಿಯೊಂದಿಗೆ ಪ್ರೇಮಸೌಧದ ಸೌಂದರ್ಯವನ್ನು ಕಣ್ತುಂಬಿಕೊಂಡರು. ಪ್ರವಾಸಿಗರ ಅಚ್ಚುಮೆಚ್ಚಿನ ತಾಣ, ಅದರಲ್ಲೂ ವಿಶೇಷವಾಗಿ ಐತಿಹಾಸಿಕ ಮಹತ್ವ ಹೊಂದಿರುವ ಐಕಾನಿಕ್ ಡಯಾನಾ ಬೆಂಚ್ನಲ್ಲಿ ಪತ್ನಿಯೊಂದಿಗೆ ಕುಳಿತು ಫೋಟೋಗೆ ಪೋಸ್ ನೀಡಿದರು.
ಕಟ್ಟುನಿಟ್ಟಿನ ಭದ್ರತೆ: ಸಾಮಾನ್ಯ ಪ್ರವಾಸಿಗರಿಗೆ ನಿರ್ಬಂಧ
ಡೊನಾಲ್ಡ್ ಟ್ರಂಪ್ ಜೂನಿಯರ್ ಅವರ ಭೇಟಿಯ ಹಿನ್ನೆಲೆಯಲ್ಲಿ ತಾಜ್ ಮಹಲ್ ಆವರಣದಲ್ಲಿ ಭಾರೀ ಭದ್ರತೆಯನ್ನು ಏರ್ಪಡಿಸಲಾಗಿತ್ತು. ಭಾರತೀಯ ಭದ್ರತಾ ಸಿಬ್ಬಂದಿಯ ಜೊತೆಗೆ, ಅನೇಕ ಅಮೆರಿಕನ್ ಭದ್ರತಾ ಏಜೆನ್ಸಿಗಳ ಏಜೆಂಟರನ್ನೂ ಕೂಡಾ ಅಲ್ಲಲ್ಲಿ ನಿಯೋಜಿಸಲಾಗಿತ್ತು. ಈ ವಿಶೇಷ ಭೇಟಿಯ ಕಾರಣದಿಂದಾಗಿ, ಸಾಮಾನ್ಯ ಪ್ರವಾಸಿಗರಿಗೆ ತಾಜ್ ಮಹಲ್‌ಗೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು, ಇದು ಸ್ಮಾರಕದ ಸುತ್ತ ಬಿಗಿ ವಾತಾವರಣವನ್ನು ಸೃಷ್ಟಿಸಿತ್ತು.

