ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಬೆಂಗಳೂರಿನಲ್ಲಿ ನಕಲಿ ನಂದಿನಿ ತುಪ್ಪ ಮಾರಾಟ ಮಾಡುತ್ತಿದ್ದ ದೊಡ್ಡ ಜಾಲವನ್ನು ಪತ್ತೆಹಚ್ಚಿದ್ದರು. ಇದೇ ರೀತಿಯಲ್ಲಿ ತಿರುಪತಿ ದೇವಸ್ಥಾನದಲ್ಲೂ ನಕಲಿ ತುಪ್ಪದ ಬಗ್ಗೆ ಮಾತುಗಳೂ ಕೇಳಿಬಂದಿದ್ದು, ಇದಕ್ಕೆ ಸೆಡ್ಡು ಹೊಡೆಯುವಂತೆ ಟಿಟಿಡಿ ಮತ್ತೊಮ್ಮೆ ಸಂಪೂರ್ಣ ವಿಶ್ವಾಸದೊಂದಿಗೆ ಕರ್ನಾಟಕದ ಕೆಎಂಎಫ್ ನಂದಿನಿ ತುಪ್ಪದತ್ತ ಮುಖ ಮಾಡಿದೆ. ನಕಲಿ ತುಪ್ಪದ ದುಷ್ಪರಿಣಾಮದಿಂದ ದೂರ ಇರಲು 2024ರ ಆಗಸ್ಟ್‌ನಿಂದಲೇ ಟಿಟಿಡಿ ನಂದಿನಿ ತುಪ್ಪವನ್ನು ಬಳಸತೊಡಗಿದ್ದು, ಈಗ ಅದರ ಬೇಡಿಕೆ ಇನ್ನಷ್ಟು ಹೆಚ್ಚಾಗಿದೆ.
ಟಿಟಿಡಿ ಹಿಂದಿನಿಗಿಂತ ಮತ್ತೊಂದು ಸಾವಿರ ಮೆಟ್ರಿಕ್ ಟನ್ ತುಪ್ಪ ಹೆಚ್ಚುವರಿಯಾಗಿ ಕೇಳಿದ್ದು, ಕೆಎಂಎಫ್ ಪ್ರತಿದಿನ 3ರಿಂದ 3.5 ಟನ್, ತಿಂಗಳಿಗೆ ಸುಮಾರು 300 ಟನ್ ತುಪ್ಪವನ್ನು ತಿರುಮಲಕ್ಕೆ ಪೂರೈಕೆ ಮಾಡುತ್ತಿದೆ.
ತುಪ್ಪ ರವಾನೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆಯದಂತೆ ಟಿಟಿಡಿ ಸಿಬ್ಬಂದಿ ನಂದಿನಿ ಘಟಕಗಳಿಗೆ ಸ್ವತಃ ತೆರಳಿ, ತುಂಬಿರುವ ವಾಹನಗಳನ್ನು ಲಾಕ್‌ಮಾಡಿ ಕಳುಹಿಸುತ್ತಿದ್ದಾರೆ. ವಾಹನ ತಿರುಪತಿಗೆ ತಲುಪಿದ ಬಳಿಕವೇ ಆ ಲಾಕ್ ತೆಗೆಯಲಾಗುತ್ತದೆ. ಜಿಪಿಎಸ್ ಟ್ರಾಕಿಂಗ್ ವ್ಯವಸ್ಥೆಯೂ ಅಳವಡಿಸಿರುವುದರಿಂದ ಸಂಪೂರ್ಣ ಭದ್ರತೆಯೊಂದಿಗೆ ತುಪ್ಪ ಸಾಗಿಸಿಕೊಳ್ಳಲಾಗುತ್ತಿದೆ. ಈ ಕ್ರಮಗಳಿಂದ ನಂದಿನಿ ತುಪ್ಪದ ಮೇಲೆ ನಂಬಿಕೆ ದಿನೇ ದಿನೇ ಹೆಚ್ಚುತ್ತಿದ್ದು, ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬ್ರ್ಯಾಂಡ್ ಮತ್ತಷ್ಟು ಸ್ವೀಕಾರಾರ್ಹವಾಗುತ್ತಿದೆ.

