ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಮಕೂರು-ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ (NH 48) ಯಲ್ಲಿ ರಸ್ತೆ ಗುಂಡಿಗಳಿಂದಾಗಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಬೆಂಗಳೂರು ಹೊರವಲಯದ ನೆಲಮಂಗಲ ನಗರದ ಕುಣಿಗಲ್ ಬೈಪಾಸ್ ಫ್ಲೈಓವರ್ ರಸ್ತೆಯಲ್ಲಿ ಗುಂಡಿಯೊಂದನ್ನು ತಪ್ಪಿಸಲು ಹೋಗಿ ಕಾರೊಂದು ನಿಯಂತ್ರಣ ಕಳೆದುಕೊಂಡು ಎರಡು ಬಾರಿ ಪಲ್ಟಿ ಹೊಡೆದಿದೆ.
ಅಪಘಾತದ ತೀವ್ರತೆಯಿಂದ ಕಾರು ಸಂಪೂರ್ಣ ಜಖಂಗೊಂಡಿದ್ದರೂ, ಕಾರಿನಲ್ಲಿದ್ದ ಆರು ಮಂದಿ ಪ್ರಯಾಣಿಕರು ಪವಾಡಸದೃಶ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಆರು ಮಂದಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟೋಲ್ ಪ್ರಾಧಿಕಾರದ ನಿರ್ಲಕ್ಷ್ಯಕ್ಕೆ ಅಮಾಯಕರ ಬಲಿ
ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಹಾಗೂ ಭಾರಿ ಪ್ರಮಾಣದ ಟೋಲ್ ಸಂಗ್ರಹವಾಗುವ ಈ ಹೆದ್ದಾರಿಯ ದುಸ್ಥಿತಿಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ಟೋಲ್ ಕಂಪನಿಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಇದೇ ರಸ್ತೆಯಲ್ಲಿ ಆಗಾಗ್ಗೆ ಅಪಘಾತಗಳು, ಸಾವು-ನೋವುಗಳು ಸಂಭವಿಸುತ್ತಿದ್ದರೂ ಸಹ, ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ಯಾರೂ ಮನಸ್ಸು ಮಾಡುತ್ತಿಲ್ಲ.
ಅಪಹಾಸ್ಯವೆಂದರೆ, ಇದೇ ರಸ್ತೆಯಲ್ಲಿ ಪ್ರತಿದಿನ ಹಲವು ಸಚಿವರು, ಶಾಸಕರು ಮತ್ತು ಉನ್ನತ ಮಟ್ಟದ ಅಧಿಕಾರಿಗಳು ಸಂಚರಿಸುತ್ತಾರೆ. ಆದರೆ, ಈ ಅಪಾಯಕಾರಿ ಪರಿಸ್ಥಿತಿ ಅವರ ಗಮನಕ್ಕೆ ಬಾರದಿರುವುದು ಅಥವಾ ನಿರ್ಲಕ್ಷಿಸುವುದು ನಮ್ಮ ಆಡಳಿತ ವ್ಯವಸ್ಥೆಯ ಅಸಡ್ಡೆಗೆ ಸಾಕ್ಷಿಯಾಗಿದೆ. ಟೋಲ್ ಪಾವತಿಸಿ ಸುಗಮ ಸಂಚಾರ ಬಯಸುವ ಅಮಾಯಕ ಜೀವಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತೊಂದರೆ ಅನುಭವಿಸುತ್ತಿರುವುದು ವಿಪರ್ಯಾಸ.