Wednesday, November 5, 2025

ಅಭಿವೃದ್ಧಿ ಪಥದಲ್ಲಿ ತುಮಕೂರು: ವಿವಿ ಕ್ಯಾಂಪಸ್, ಕಲ್ಯಾಣ ಮಂಟಪ, ಒಳಚರಂಡಿ ಯೋಜನೆಗೆ ಸಿಎಂ ಚಾಲನೆ!

ಹೊಸದಿಗಂತ ತುಮಕೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್ 7 ರಂದು ತುಮಕೂರು ಜಿಲ್ಲೆಗೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಶಿಕ್ಷಣ, ಆರೋಗ್ಯ ಮತ್ತು ನಗರ ಮೂಲಸೌಕರ್ಯಕ್ಕೆ ಸಂಬಂಧಿಸಿದ ಹಲವಾರು ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಪ್ರಮುಖ ಕಾರ್ಯಕ್ರಮಗಳು:

ವಿಶ್ವವಿದ್ಯಾನಿಲಯ ನೂತನ ಕ್ಯಾಂಪಸ್ ಉದ್ಘಾಟನೆ: ಸಿಎಂ ಅವರು ಅಂದು ಬೆಳಿಗ್ಗೆ 10.50 ಗಂಟೆಗೆ ತುಮಕೂರು ವಿಶ್ವವಿದ್ಯಾನಿಲಯ ಹೆಲಿಪ್ಯಾಡ್‌ಗೆ ಆಗಮಿಸಿ, ನಂತರ ತುಮಕೂರು ತಾಲ್ಲೂಕಿನ ಹೆಬ್ಬೂರು ಹೋಬಳಿ, ಬಿದರೆಕಟ್ಟೆ-ಮಾಕನಹಳ್ಳಿ ಗ್ರಾಮದಲ್ಲಿ ನಿರ್ಮಿಸಲಾದ ತುಮಕೂರು ವಿಶ್ವವಿದ್ಯಾನಿಲಯದ ನೂತನ ಕ್ಯಾಂಪಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕಲ್ಯಾಣ ಮಂಟಪ ಉದ್ಘಾಟನೆ ಮತ್ತು ಕಲ್ಯಾಣೋತ್ಸವ: ಮಧ್ಯಾಹ್ನ 1.15 ಗಂಟೆಗೆ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್‌ನಲ್ಲಿರುವ ಎಸ್.ಎಲ್.ಎನ್. ಕನ್ವೆನ್ಷನ್ ಹಾಲ್ ಕಲ್ಯಾಣ ಮಂಟಪವನ್ನು ಉದ್ಘಾಟಿಸಿ, ಬಳಿಕ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ಕಲ್ಯಾಣೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವರು.

ಆರೋಗ್ಯ ಮತ್ತು ನಗರಾಭಿವೃದ್ಧಿ ಯೋಜನೆಗಳಿಗೆ ಚಾಲನೆ: ಮಧ್ಯಾಹ್ನ 2.30 ಗಂಟೆಗೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಡೆಯುವ ಬೃಹತ್ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಆರೋಗ್ಯ ಕ್ಷೇತ್ರ: ತುಮಕೂರು ಜಿಲ್ಲಾ ಆಸ್ಪತ್ರೆಯ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಲ್ಲದೆ, ತುಮಕೂರು ನಗರದ ದಿಬ್ಬೂರು ಹಾಗೂ ದೋಬಿಘಾಟ್‌ನಲ್ಲಿ 2 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ.

ನೀರು ಮತ್ತು ಒಳಚರಂಡಿ ಯೋಜನೆ:

ತುಮಕೂರು ತಾಲ್ಲೂಕಿನ ಭೀಮಸಂದ್ರ ಕೆರೆಯಿಂದ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ 30 ಎಂ.ಎಲ್.ಡಿ. ತೃತೀಯ ಹಂತದ ಸಂಸ್ಕರಿಸಿದ ನೀರು ಪೂರೈಕೆ ಯೋಜನೆಯ ವರ್ಚುವಲ್ ಉದ್ಘಾಟನೆ.

ತುಮಕೂರು ನಗರದ 2ನೇ ಹಂತದ ಒಳಚರಂಡಿ ಯೋಜನೆಯಡಿ ನಿರ್ಮಿಸಿರುವ 25 ಎಂ.ಎಲ್.ಡಿ. ಸಾಮರ್ಥ್ಯದ ಮಲಿನ ನೀರು ಸಂಸ್ಕರಣಾ ಘಟಕದ ವರ್ಚುವಲ್ ಉದ್ಘಾಟನೆ.

ನಗರ ಕಾಮಗಾರಿಗಳು: ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ (ಹಂತ-2) ಮತ್ತು ಎಲ್.ಜಿ.ಟಿ. ಅನುದಾನದಡಿ ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಳ್ಳುವ ಒಳಚರಂಡಿ ನಿರ್ಮಾಣ/ಉನ್ನತೀಕರಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ.

ಕಾರ್ಯಕ್ರಮಗಳ ನಂತರ ಮುಖ್ಯಮಂತ್ರಿಗಳು ಮಧ್ಯಾಹ್ನ 3.55 ಗಂಟೆಗೆ ತುಮಕೂರು ವಿಶ್ವವಿದ್ಯಾನಿಲಯ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಮೂಲಕ ಚಿತ್ರದುರ್ಗ ಜಿಲ್ಲೆಗೆ ಪ್ರಯಾಣಿಸಲಿದ್ದಾರೆ.

error: Content is protected !!