ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಡೀಪುರ ಹುಲಿ ಅಭಯಾರಣ್ಯದ ರಾಷ್ಟ್ರೀಯ ಹೆದ್ದಾರಿ–766ರಲ್ಲಿ ಜಾರಿಯಲ್ಲಿರುವ ರಾತ್ರಿ ಪ್ರಯಾಣ ನಿಷೇಧಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ, ಅರಣ್ಯ ರಸ್ತೆಗೆ ಪರ್ಯಾಯವಾಗಿ ಸುರಂಗ ರಸ್ತೆ (ಟನಲ್ ರಸ್ತೆ) ನಿರ್ಮಾಣದ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಈ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಅವರಿಗೆ ಪತ್ರದ ಮೂಲಕ ಮಾಹಿತಿ ನೀಡಿದ್ದು, ಕೇರಳದಿಂದ ದೀರ್ಘಕಾಲದಿಂದಲೂ ಕೇಳಿಬರುತ್ತಿರುವ ರಾತ್ರಿ ಸರಕು ಹಾಗೂ ಪ್ರಯಾಣಿಕರ ಸಂಚಾರ ನಿರ್ಬಂಧದ ಬಗ್ಗೆ ಇರುವ ದೂರುಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಬಂಡೀಪುರದ ಸೂಕ್ಷ್ಮ ಅರಣ್ಯ ಮಾರ್ಗವನ್ನು ಬೈಪಾಸ್ ಮಾಡುವ ಸುರಂಗ ಯೋಜನೆಯ ವಿವಿಧ ಆಯ್ಕೆಗಳನ್ನು ಅಧ್ಯಯನ ಮಾಡುತ್ತಿದೆ. ಈ ಅಧ್ಯಯನದಲ್ಲಿ ತಾಂತ್ರಿಕ ಸಾಧ್ಯತೆ, ವೆಚ್ಚ, ಪರಿಸರದ ಮೇಲೆ ಬೀರುವ ಪರಿಣಾಮ ಹಾಗೂ ವನ್ಯಜೀವಿ ಸಂರಕ್ಷಣೆಯ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.
ಬಂಡೀಪುರ ಅರಣ್ಯ ಪ್ರದೇಶವು ಅತ್ಯಂತ ಸೂಕ್ಷ್ಮ ವನ್ಯಜೀವಿ ವಾಸಸ್ಥಳವಾಗಿರುವುದರಿಂದ, ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಸಾರಿಗೆ ಅಗತ್ಯಗಳ ನಡುವಿನ ಸಮತೋಲನ ಸಾಧಿಸುವುದು ವರ್ಷಗಳಿಂದಲೂ ಸವಾಲಾಗಿ ಪರಿಣಮಿಸಿದೆ.
ಸಂಸದೆ ಪ್ರಿಯಾಂಕಾ ಗಾಂಧಿ ಅವರು 2025ರ ಅಕ್ಟೋಬರ್ 11ರಂದು ಈ ಕುರಿತು ಮೊದಲ ಬಾರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದರು. ಬಳಿಕ 2025ರ ಡಿಸೆಂಬರ್ 19ರಂದು ಅವರು ನೇರವಾಗಿ ಸಚಿವರನ್ನು ಭೇಟಿ ಮಾಡಿ, ಬಂಡೀಪುರ ಅರಣ್ಯ ರಸ್ತೆಗೆ ಪರ್ಯಾಯವಾಗಿ ಸುರಂಗ ಮಾರ್ಗ ನಿರ್ಮಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ತಮ್ಮ ಚುನಾವಣಾ ಭರವಸೆಗಳಲ್ಲಿಯೂ ಈ ವಿಚಾರವನ್ನು ಅವರು ಪ್ರಮುಖವಾಗಿ ಉಲ್ಲೇಖಿಸಿದ್ದರು.
ನೀಲಂಬೂರ್–ನಂಜನಗೂಡು ರೈಲು ಮಾರ್ಗಕ್ಕೆ ಸಮಾನಾಂತರವಾಗಿ ಬಂಡೀಪುರ ಪ್ರದೇಶದಲ್ಲಿ ಸುರಂಗ ಮಾರ್ಗ ನಿರ್ಮಿಸುವ ಮೂಲಕ ರಾತ್ರಿ ಪ್ರಯಾಣ ನಿಷೇಧವನ್ನು ನಿವಾರಿಸಬೇಕು ಎಂಬ ಬೇಡಿಕೆಯನ್ನು, ಈ ಹಿಂದೆ ರಾಹುಲ್ ಗಾಂಧಿ ಸಂಸದರಾಗಿದ್ದಾಗಲೇ ಸಂಸತ್ತಿನಲ್ಲಿ ಮಂಡಿಸಿದ್ದರು. ಇದೀಗ ಪ್ರಸ್ತಾಪ ಮತ್ತೊಮ್ಮೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚೆಗೆ ಬಂದಿದ್ದು, ಆಡಳಿತಾತ್ಮಕ ಸ್ಪಂದನೆ ದೊರೆತಿರುವುದು ಮಹತ್ವ ಪಡೆದುಕೊಂಡಿದೆ.
ಬಂಡೀಪುರ ಹುಲಿ ಮೀಸಲು ಪ್ರದೇಶದಲ್ಲಿ ವನ್ಯಜೀವಿಗಳನ್ನು ರಕ್ಷಿಸುವ ಉದ್ದೇಶದಿಂದ 2009ರಲ್ಲಿ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ವಾಹನ ಸಂಚಾರ ನಿಷೇಧವನ್ನು ಜಾರಿಗೆ ತರಲಾಗಿತ್ತು. ಆದರೆ, ಈ ನಿರ್ಬಂಧವು ವರ್ಷಗಳಿಂದ ಕೇರಳದ ಆರ್ಥಿಕ ಚಟುವಟಿಕೆಗಳು, ಸಾರಿಗೆ ವ್ಯವಸ್ಥೆ ಹಾಗೂ ತುರ್ತು ಸೇವೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಆಕ್ಷೇಪಗಳು ಕೇಳಿಬರುತ್ತಿವೆ.



