ಟರ್ಕಿ ಭೂಕಂಪನ: ರಕ್ಷಣಾ ಕಾರ್ಯಾಚರಣೆಗೆ ದೌಡಾಯಿಸಿದ ಭಾರತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಭೀಕರ ಭೂಕಂಪನಕ್ಕೆ ಸಿಲುಕಿ ಟರ್ಕಿ ಹಾಗೂ ಸಿರಿಯಾ ತತ್ತರಿಸಿದ್ದು, ಸಾವಿನ ಸಂಖ್ಯೆ 500 ಗಡಿ ದಾಟಿದೆ. ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಹೋಗುತ್ತಿದೆ.
ಈ ನಡುವೆ ಭೂಕಂಪನದಿಂದ ನಲುಗಿದ ಟರ್ಕಿ ದೇಶಕ್ಕೆ ನೆರವು ನೀಡಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದು, ಈ ಬಗ್ಗೆ ಪ್ರಧಾನಿ ಸಚಿವಾಲಯ ಸಭೆ ನಡೆಸಿದೆ.

ಸಾಧ್ಯವಿರುವ ಎಲ್ಲ ನೆರವನ್ನು ನೀಡಲು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ ಹಿನ್ನೆಲೆಯಲ್ಲಿ ತಕ್ಷಣದ ಪರಿಹಾರ ಕ್ರಮಗಳ ಕುರಿತು ಚರ್ಚಿಸಲು ಪ್ರಧಾನಿ ಸಚಿವಾಲಯದಲ್ಲಿ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಟರ್ಕಿ ಗಣರಾಜ್ಯದ ಸರ್ಕಾರದೊಂದಿಗೆ ಚರ್ಚೆ ನಡೆಸಿ ತಕ್ಷಣದ ತುರ್ತು ಅಗತ್ಯದ, ರಕ್ಷಣಾ ಕಾರ್ಯಾಚರಣಾ ತಂಡಗಳು ಹಾಗೂ ವೈದ್ಯಕೀಯ ತಂಡಗಳು, ವೈದ್ಯಕೀಯ ಪರಿಹಾರ ಸಾಮಾಗ್ರಿಗಳನ್ನು ಟರ್ಕಿಗೆ ಕಳುಹಿಸಲಾಗುತ್ತಿದೆ.

ಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ.ಮಿಶ್ರಾ ( Dr. P. K. Mishra) ಅವರು ತಕ್ಷಣದ ಪರಿಹಾರ ಕ್ರಮಗಳ ಕುರಿತು ಚರ್ಚಿಸಲು ಸೌತ್ ಬ್ಲಾಕ್‌ನಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಎನ್‌ಡಿಆರ್‌ಎಫ್ ತಂಡ, ವೈದ್ಯಕೀಯ ತಂಡ, ರಕ್ಷಣಾ ಕಾರ್ಯಾಚರಣೆ ತಂಡವನ್ನು ತುರ್ತು ಘಟನಾ ಸ್ಥಳಕ್ಕೆ ಕಳುಹಿಸಲು ನಿರ್ಧರಿಸಲಾಯಿತು.

ವಿಶೇಷ ತರಬೇತಿ ಪಡೆದ ಶ್ವಾನದಳಗಳು ಮತ್ತು ಅಗತ್ಯ ಉಪಕರಣಗಳೊಂದಿಗೆ 100 ಸಿಬ್ಬಂದಿಗಳನ್ನು ಒಳಗೊಂಡಿರುವ ಎನ್‌ಡಿಆರ್‌ಎಫ್‌ನ (NDRF)ಎರಡು ತಂಡಗಳು ಭೂಕಂಪ ಪೀಡಿತ ಪ್ರದೇಶಕ್ಕೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಹೋಗಲು ಸಿದ್ಧವಾಗಿವೆ. ಅಗತ್ಯ ಔಷಧಗಳೊಂದಿಗೆ ತರಬೇತಿ ಪಡೆದ ವೈದ್ಯರು ಮತ್ತು ಅರೆವೈದ್ಯರೊಂದಿಗೆ ವೈದ್ಯಕೀಯ ತಂಡಗಳನ್ನು ಸಹ ಸಿದ್ಧಗೊಳಿಸಲಾಗುತ್ತಿದೆ. ಜೊತೆಗೆ ರಿಪಬ್ಲಿಕ್ ಆಫ್ ಟರ್ಕಿಯ ಸರ್ಕಾರ ಮತ್ತು ಅಂಕಾರಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಇಸ್ತಾಂಬುಲ್‌ನಲ್ಲಿರುವ (Istanbul) ಕಾನ್ಸುಲೇಟ್ ಜನರಲ್ ಕಚೇರಿ ಜೊತೆ ಸಮನ್ವಯದೊಂದಿಗೆ ಪರಿಹಾರ ಸಾಮಗ್ರಿಗಳನ್ನು ಕೂಡ ರವಾನಿಸಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!