ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರದ ವಿರುದ್ಧ ಟರ್ಕಿಯ ಸೆಲೆಬಿ ಕಂಪನಿ ದೆಹಲಿ ಹೈಕೋರ್ಟ್ ಮೊರೆ ಹೋಗಿದೆ.
ನಮ್ಮ ಕಂಪನಿ ರಾಷ್ಟ್ರೀಯ ಭದ್ರತೆಗೆ ಹೇಗೆ ಬೆದರಿಕೆಯಾಗಿದೆ ಎಂಬುದನ್ನು ವಿವರಿಸದೇ ಲೈಸನ್ಸ್ ರದ್ದುಗೊಳಿಸಿದ್ದು ಸರಿಯಲ್ಲ. ಇದರಿಂದಾಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 3,791 ಉದ್ಯೋಗಿಗಳು ಮತ್ತು ಹೂಡಿಕೆದಾರರ ವಿಶ್ವಾಸದ ಮೇಲೆ ಪರಿಣಾಮ ಬೀರುತ್ತದೆ ಎಂದು ಸೆಲಿಬಿ ಅರ್ಜಿಯಲ್ಲಿ ಉಲ್ಲೇಖಿಸಿದೆ.
ರದ್ದತಿಗೆ ಯಾವುದೇ ಯಾವುದೇ ನಿರ್ದಿಷ್ಟ ಕಾರಣ ನೀಡಿಲ್ಲ. ಕಂಪನಿ ಟರ್ಕಿಯಲ್ಲಿ ಹೆಸರು ನೋಂದಣಿಯಾಗಿದ್ದರೂ ಬಹುತೇಕ ಹೂಡಿಕೆದಾರು ಟರ್ಕಿ ಮೂಲವನ್ನು ಹೊಂದಿಲ್ಲ ಎಂದು ತಿಳಿಸಿದೆ.
ದೇಶದ 9 ವಿಮಾನ ನಿಲ್ದಾಣಗಳಲ್ಲಿ ಪ್ರಾಥಮಿಕ ಹಂತದ ಸೇವೆಗಳನ್ನು ನೀಡುತ್ತಿದ್ದ ಟರ್ಕಿಯ ಸೆಲೆಬಿ ಏವಿಯೇಷನ್ ಕಂಪನಿಗೆ ನೀಡಲಾಗಿದ್ದ ಸೇವಾ ಲೈಸನ್ಸ್ ಗಳನ್ನು ಭಾರತೀಯ ನಾಗರಿಕ ವಿಮಾನಯಾನ ಸುರಕ್ಷಾ ಬ್ಯೂರೋ (ಬಿಸಿಸಿಎಸ್) ಮೇ 15 ರದ್ದು ಮಾಡಿತ್ತು. ರಾಷ್ಟ್ರೀಯ ಭದ್ರತಾ ಕಾಳಜಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಿತ್ತು.
ಬೆಂಗಳೂರು, ಮುಂಬೈ, ದೆಹಲಿ, ಹೈದರಾಬಾದ್, ಕೊಚ್ಚಿನ್, ಕಣ್ಣೂರು, ಚೆನ್ನೈ, ಗೋವಾದಲ್ಲಿ ಈ ಕಂಪನಿ ಪ್ರಾಥಮಿಕ ಸೇವೆ ನೀಡುತ್ತಿತ್ತು. ಸದ್ಯವೇ ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ಪ್ರಾಥಮಿಕ ಸೇವೆಗಳನ್ನು ನೀಡುವ ಗುತ್ತಿಗೆಯ ಆ ಕಂಪನಿ ಪಡೆಯಲು ಸಿದ್ಧತೆ ನಡೆಸಿತ್ತು. ಅಷ್ಟರಲ್ಲೇ ಭಾರತ ಸರ್ಕಾರ ಸೆಲೆಬಿಗೆ ನೀಡಲಾಗಿದ್ದ ಸೇವಾ ಲೈಸೆನ್ಸ್ ರದ್ದುಗೊಳಿಸಿದೆ.