ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಅಶಾಂತ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಮತ್ತೆ ಭದ್ರತಾ ವೈಫಲ್ಯ ಉಂಟಾಗಿದೆ. ಪ್ರಮುಖ ರೈಲು ಸಂಪರ್ಕವನ್ನು ಅಸ್ತವ್ಯಸ್ತಗೊಳಿಸುವ ಉದ್ದೇಶದಿಂದ ಶಂಕಿತ ಉಗ್ರರು ಮುಖ್ಯ ರೈಲ್ವೆ ಮಾರ್ಗದಲ್ಲಿ ಎರಡು ಪ್ರತ್ಯೇಕ ಬಾಂಬ್ ಸ್ಫೋಟಗಳನ್ನು ನಡೆಸಿದ್ದಾರೆ.
ಮುಷ್ಕಫ್ ಹಾಗೂ ಮಸ್ತುಂಗ್ ಜಿಲ್ಲೆಯ ದಾಶ್ಟ್ ಪ್ರದೇಶಗಳಲ್ಲಿ ನಡೆದ ಈ ಸ್ಫೋಟಗಳು ಪೇಶಾವರ್‌ಗೆ ತೆರಳುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ಮತ್ತು ಕರಾಚಿಗೆ ಹೋಗುತ್ತಿದ್ದ ಬೋಲನ್ ಮೇಲ್ ರೈಲುಗಳನ್ನು ಗುರಿಯಾಗಿಸಿಕೊಂಡಿದ್ದವು.
ಸ್ಫೋಟಗಳಿಂದ ಹಳಿಯ ಕೆಲವು ಭಾಗಗಳು ಗಂಭೀರವಾಗಿ ಹಾನಿಗೊಳಗಾದರೂ, ಎರಡೂ ರೈಲುಗಳು ನೇರ ಅಪಘಾತದಿಂದ ಪಾರಾಗಿವೆ. ಆದರೆ ಘಟನೆ ಪರಿಣಾಮ ಬಲೂಚಿಸ್ತಾನ್ ಸೇರಿದಂತೆ ಪಾಕಿಸ್ತಾನದ ಇನ್ನೂ ಮೂರು ಪ್ರಾಂತ್ಯಗಳ ನಡುವಿನ ರೈಲು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಸ್ಥಳಕ್ಕೆ ಭದ್ರತಾ ಪಡೆಗಳು ಮತ್ತು ದುರಸ್ತಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಹಲವಾರು ಪ್ರಯಾಣಿಕರು ಮಾರ್ಗ ಮಧ್ಯೆ ಸಿಲುಕಿಕೊಂಡಿದ್ದಾರೆ.
ಕ್ವೆಟ್ಟಾ ಹಿರಿಯ ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ, ಮೊದಲ ಸ್ಫೋಟದಲ್ಲಿ ಸುಮಾರು ಮೂರು ಅಡಿ ಹಳಿ ನಾಶವಾಗಿದ್ದು, ನಂತರದ ಸ್ಫೋಟವು ಮುಖ್ಯ ಮಾರ್ಗಕ್ಕೆ ಮತ್ತಷ್ಟು ಹಾನಿ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಜಾರಿಗೆ ತಂದಿದ್ದು, ಕ್ವೆಟ್ಟಾದಿಂದ ಹೊರಡುವ ರೈಲುಗಳಿಗೆ ವಿಶೇಷ ಅನುಮತಿ ಕಡ್ಡಾಯಗೊಳಿಸಲಾಗಿದೆ.

