ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಡೆವಿಲ್’ ಇಂದು ಬಿಡುಗಡೆಯಾಗಿ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲಿನಲ್ಲಿದ್ದರೂ, ಅವರ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಹಿಂದೆ ಬಿದ್ದಿಲ್ಲ. ಚಿತ್ರಮಂದಿರಗಳ ಮುಂದೆ ಮುಗಿಬಿದ್ದ ಜನರು, ಚಿತ್ರವನ್ನು ಹಬ್ಬದಂತೆ ಸ್ವಾಗತಿಸುತ್ತಿದ್ದಾರೆ.
ಏಕಪರದೆ ಚಿತ್ರಮಂದಿರಗಳಲ್ಲಿ ಈಗಾಗಲೇ ‘ಡೆವಿಲ್’ ಚಿತ್ರದ ಅಬ್ಬರ ಶುರುವಾಗಿದೆ. ಬಹುತೇಕ ಕಡೆಗಳಲ್ಲಿ ಮುಂಜಾನೆ 6.30ಕ್ಕೆ ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಲಾಗಿತ್ತು. ಈ ಮೊದಲ ಶೋ ನೋಡಿದ ಅಭಿಮಾನಿಗಳು ತಮ್ಮ ಉತ್ಸಾಹ ಮತ್ತು ವಿಮರ್ಶೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಮಾಸ್ ಡೈಲಾಗ್, ಟ್ವಿಸ್ಟ್‌ಗಳಿಗೆ ಫುಲ್ ಮಾರ್ಕ್ಸ್!
ಮಿಲನ ಪ್ರಕಾಶ್ ನಿರ್ದೇಶನದ ಈ ಚಿತ್ರ ಮಾಸ್ ಡೈಲಾಗ್‌ಗಳು ಮತ್ತು ರೋಚಕ ತಿರುವುಗಳ ಮೂಲಕ ದರ್ಶನ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿದೆ. ಮೊದಲ ಪ್ರದರ್ಶನ ಮುಗಿದ ನಂತರ, ಅಭಿಮಾನಿಗಳು ಟ್ವಿಟರ್‌ನಲ್ಲಿ “ನಾವು ಗೆದ್ವಿ” ಎಂದು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ದರ್ಶನ್ ಅವರ ಈ ಹಿಂದಿನ ಹಿಟ್ ಸಿನಿಮಾ ‘ಕಾಟೇರ’ದಂತೆಯೇ ‘ಡೆವಿಲ್’ ಕೂಡ ಅಭಿಮಾನಿಗಳ ಜೊತೆ ಕುಟುಂಬ ಪ್ರೇಕ್ಷಕರಿಗೂ ಇಷ್ಟವಾಗುವ ಅಂಶಗಳನ್ನು ಹೊಂದಿದೆ ಎಂಬುದು ಪ್ರೇಕ್ಷಕರ ಅಭಿಪ್ರಾಯ. “ಫ್ಯಾನ್ಸ್ಗೂ ಜೈ, ಫ್ಯಾಮಿಲಿ ಆಡಿಯನ್ಸ್ಗೂ ಜೈ” ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ದರ್ಶನ್ ಅವರ ಆರಂಭಿಕ ಎಂಟ್ರಿ ಮತ್ತು ಅವರ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಈ ಚಿತ್ರವು ದರ್ಶನ್ ಅಭಿಮಾನಿಗಳಿಗೆ ಹಬ್ಬದೂಟದಂತೆ ಭಾಸವಾಗಿದೆ.
ದರ್ಶನ್ ಅವರಿಗೆ ಈ ಸಂದರ್ಭದಲ್ಲಿ ಒಂದು ಯಶಸ್ವಿ ಸಿನಿಮಾ ಅತ್ಯಂತ ಮುಖ್ಯವಾಗಿತ್ತು. ಅವರು ಜೈಲಿನಲ್ಲಿರುವ ಕಾರಣ ಚಿತ್ರದ ಪ್ರಚಾರ ದೊಡ್ಡ ಸವಾಲಾಗಿತ್ತು. ಆದರೆ, ಅಭಿಮಾನಿಗಳು ಸ್ವತಃ ಮುಂದೆ ನಿಂತು, ಸಿನೆಮಾಗೆ ಪ್ರಚಾರ ನೀಡಿ, ಅದನ್ನು ಯಶಸ್ವಿಯನ್ನಾಗಿಸಿದ್ದಾರೆ. ಈ ಮೂಲಕ, ದರ್ಶನ್ ಅನುಪಸ್ಥಿತಿಯಲ್ಲೂ ಅಭಿಮಾನಿಗಳ ಶಕ್ತಿ ಮತ್ತೊಮ್ಮೆ ಸಾಬೀತಾಗಿದೆ.

