ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ನಟಿ ರನ್ಯಾ ರಾವ್ ಚಿನ್ನದ ಕಳ್ಳಸಾಗಣೆ ಕೇಸ್ ಕುರಿತು ದಿನಕ್ಕೊಂದು ಸಂಗತಿ ಹೊರಬೀಳುತ್ತಿದ್ದು, ಉಗಾಂಡಾ ಮೂಲದ ಏಜೆಂಟರೊಂದಿಗೆ ನಟಿ ರನ್ಯಾ ಒಪ್ಪಂದ ಮಾಡಿಕೊಂಡಿದ್ದಳು ಎಂಬ ವಿಚಾರ ಬೆಳಕಿಗೆ ಬಂದಿದೆ.
ದುಬೈನಿಂದ ಬೆಂಗಳೂರಿಗೆ 102.55 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ನಟಿ ರನ್ಯಾ ರಾವ್ ಅವರನ್ನು ಬಂಧಿಸಲಾಗಿದ್ದು, ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದೆ.
ರನ್ಯಾ ರಾವ್ ಮತ್ತು ಅವರ ಸಹಚರ ತರುಣ್ ಕೊಂದುರು ರಾಜು ಉಗಾಂಡಾ ಸೇರಿದಂತೆ ಆಫ್ರಿಕಾ ದೇಶಗಳಿಂದ ನೇರವಾಗಿ ಚಿನ್ನ ಖರೀದಿಸಲು ಪ್ರಯತ್ನಿಸಿದ್ದರು. ಇದಕ್ಕಾಗಿ ಉಗಾಂಡಾ ಮೂಲದ ಮಧ್ಯವರ್ತಿ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಜೊತೆಗೆ ಚಿನ್ನ ಸಾಗಿಸಲು ದುಬೈನಲ್ಲಿ ‘ವೀರಾ ಡೈಮಂಡ್ಸ್ ಟ್ರೇಡಿಂಗ್’ ಎಂಬ ಕಂಪೆನಿ ತೆರೆದಿದ್ದರು.
ಆರಂಭದಲ್ಲಿ ರನ್ಯಾ, ತರುಣ್ ಮತ್ತು ಉಗಾಂಡಾದ ಮಧ್ಯವರ್ತಿ ಸೇರಿಕೊಂಡು 5 ಕೆಜಿ ಚಿನ್ನವನ್ನು ಮೊದಲಿಗೆ ಸಾಗಿಸಲು ಯತ್ನ ನಡೆಸಿದ್ದರು. ಆ ಬಳಿಕ ಈ ತಂಡ ಬರೋಬ್ಬರಿ 50 ಕೆಜಿ ಚಿನ್ನದ ಸಾಗಣೆಗೆ ಡೀಲಿಂಗ್ ನಡೆಸಿತ್ತು. ಇದಕ್ಕಾಗಿ ಕೋಟ್ಯಂತರ ರೂಪಾಯಿಗೆ ಮಾತುಕತೆಯು ನಡೆದಿತ್ತು. ಆರಂಭದಲ್ಲಿ ಏಜೆಂಟ್ 1.7 ಕೋಟಿ ರೂಪಾಯಿ ಬೇಡಿಕೆಯಿಟ್ಟಿದ್ದನು. ಅದರಂತೆ ಹಣವನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ ಈ ವೇಳೆ ರನ್ಯಾ ರಾವ್ ಹಾಗೂ ತರುಣ್ ಕೊಂದುರು ರಾಜು ಅವರಿಗೆ ತಾವು ಮೋಸ ಹೋಗಿರುವುದು ತಿಳಿದುಬಂದಿದೆ. ಈ ರೀತಿ ಎರಡು ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇದಾದ ಬಳಿಕ ಕೀನ್ಯಾದಲ್ಲಿ ಕೂಡ ವ್ಯವಹಾರ ನಡೆಸಲು ಇಬ್ಬರೂ ಪ್ರಯತ್ನಿಸಿದ್ದರು. ಆದರೆ ಅಲ್ಲಿ ಕೂಡ ವಂಚನೆಗೆ ಒಳಗಾದರು. ಬಳಿಕ ದುಬೈನಲ್ಲಿದ್ದ ಆಫ್ರಿಕಾ ಮೂಲದ ಚಿನ್ನ ಮಾರಾಟಗಾರರ ಜೊತೆ ಮಾತುಕತೆ ನಡೆಯಿತು. ಈ ರೀತಿ ಒಂದರ ಮೇಲೊಂದರಂತೆ ವಿದೇಶಗಳಲ್ಲಿ ಚಿನ್ನ ಖರೀದಿ ಮಾಡಿ,ಅಕ್ರಮವಾಗಿ ಭಾರತಕ್ಕೆ ತರಲಾಗುತ್ತಿತ್ತು ಎಂದು ತನಿಖೆಯಲ್ಲಿ ಬಯಲಾಗಿದೆ.
ಆದರೆ 2025ರ ಮಾರ್ಚ್ 3ರಂದು ದುಬೈನಿಂದ ಬೆಂಗಳೂರಿಗೆ ಬಂದಿಳಿದಾಗ ಡಿಆರ್ಐ ಅಧಿಕಾರಿಗಳು ನಟಿ ರನ್ಯಾ ರಾವ್ ಅವರನ್ನು ತಪಾಸಣೆ ಮಾಡಿದ್ದು, ಈ ವೇಳೆ 14.213 ಕೆಜಿ ಚಿನ್ನ ಪತ್ತೆಯಾಗಿತ್ತು. ಇದಾದ ಬಳಿಕ ಸಂಪೂರ್ಣ ಹಗರಣವೇ ಬಯಲಾಗಿದೆ ಬಂದಿದೆ.
ಇಡಿ ಇಲ್ಲಿವರೆಗೆ ರನ್ಯಾ ರಾವ್ ಹೆಸರಿನಲ್ಲಿದ್ದ 34.12 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದೆ. ಜೊತೆಗೆ 2.67 ಕೋಟಿ ರೂಪಾಯಿ ನಗದು ಮತ್ತು 2.06 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.



