ಹೊಸದಿಗಂತ ವರದಿ, ದಾವಣಗೆರೆ:
ರಾಜ್ಯಾದ್ಯಂತ ಸದ್ದು ಮಾಡಿದ್ದ ಅತ್ತೆ-ಅಳಿಯ ಪರಾರಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮನೆಗೆ ಮರಳಿದ ಅತ್ತೆ ಹಾಗೂ ಮಗಳ ನಡುವೆ ಮಾರಾಮಾರಿ ನಡೆದಿದೆ. ಅಳಿಯ ಈಗಲೂ ನಾಪತ್ತೆಯಾಗಿದ್ದಾನೆ.
ಜಿಲ್ಲೆಯ ಚನ್ನಗಿರಿ ತಾಲ್ಲೂಕು ಮುದ್ದೇನಹಳ್ಳಿಯಲ್ಲಿ ನಾಗರಾಜ ಎಂಬುವರ ಎರಡನೇ ಪತ್ನಿ ಶಾಂತಾ ತಮ್ಮ ಮಲಮಗಳು ಹೇಮಾಳ ಪತಿ ಗಣೇಶ ಜೊತೆಗೆ ಪರಾರಿಯಾಗಿದ್ದ ಪ್ರಕರಣ ಎಲ್ಲೆಡೆ ಸದ್ದು ಮಾಡಿತ್ತು. ಈಗ ಅತ್ತೆ ಶಾಂತಾ ಮುದ್ದೇನಹಳ್ಳಿ ಗ್ರಾಮಕ್ಕೆ ಮರಳಿದ್ದು, ಈ ವೇಳೆ ಶಾಂತಾ ಮತ್ತು ಹೇಮಾ ನಡುರಸ್ತೆಯಲ್ಲೇ ಒಬ್ಬರಿಗೊಬ್ಬರು ಕೈಕೈ ಮಿಲಾಯಿಸಿಕೊಂಡು ಜಗಳ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ ಹೇಮಾ ಮತ್ತು ಶಾಂತಾ ಇಬ್ಬರಿಗೂ ಗಾಯಗಳಾಗಿದ್ದು, ಚನ್ನಗಿರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ತಾನು ಅಳಿಯನೊಂದಿಗೆ ಓಡಿ ಹೋಗಿಲ್ಲ. ಎಲ್ಲರೂ ಕಟ್ಟು ಕಥೆ ಕಟ್ಟಿದ್ದಾರೆ. ಮದುವೆಗೆ ನನ್ನಿಂದ ಸಾಲ ಮಾಡಿಸಿ, ಈಗ ಸಾಲ ವಾಪಸ್ಸು ಕೊಡದೆ ಹಿಂಸೆ ನೀಡುತ್ತಿದ್ದಾರೆ ಎಂದು ಅತ್ತೆ ಶಾಂತಾ ಆರೋಪಿಸಿದ್ದಾರೆ. ಮಾಧ್ಯಮಗಳಿಗೆ ಸುದ್ದಿ ನೀಡಿದ್ದಕ್ಕೆ ಸಾಲಗಾರರನ್ನು ಕರೆದುಕೊಂಡು ಬಂದು ಮಲತಾಯಿ ಶಾಂತಾ ಹಲ್ಲೆ ಮಾಡಿದ್ದಾರೆ ಎಂದು ಹೇಮಾ ದೂರಿದ್ದಾರೆ. ಈ ಮಧ್ಯೆ ಶಾಂತಾ ಉದ್ದೇಶಪೂರ್ವಕವಾಗಿ ಸಾಲಗಾರರನ್ನು ಬಿಟ್ಟು ಮನೆಗೆ ಬೀಗ ಹಾಕಿಸಿದ್ದು, ಮನೆಯನ್ನು ಬಿಡಿಸಿಕೊಡುವಂತೆ ನಾಗರಾಜ್ ಪೊಲೀಸರಿಗೆ ಮೋರೆ ಹೋಗಿದ್ದಾರೆ ಎನ್ನಲಾಗಿದೆ.