ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಮಲ ತಿರುಪತಿ ಪ್ರಸಾದ ಲಡ್ಡುವಿನಲ್ಲಿ ಪ್ರಾಣಿಯ ಕೊಬ್ಬು ಬಳಕೆಯ ಆರೋಪ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಅವಧಿಯಲ್ಲಿ ಇಂತಹದೊಂದು ಅನಾಹುತ ನಡೆದಿದೆ ಎಂದು ಹಾಲಿ ಸಿಎಂ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದರು.
ಇದೀಗ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಸುದ್ದಿಗೋಷ್ಟಿ ನಡೆಸಿ ತಿರುಗೇಟು ನೀಡಿದ್ದಾರೆ.
ದೇವಸ್ಥಾನದಲ್ಲಿ ಲಡ್ಡು ತಯಾರಿಕೆಗೆ ತುಪ್ಪದ ಮಾದರಿ ಸಂಗ್ರಹಿಸಿ ಪ್ರಮಾಣಿಕರಿಸಿದ ಬಳಿಕವೇ ತುಪ್ಪದ ಬಳಕೆ ಮಾಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರಸಾದದ ಅರ್ಹತೆಯ ಮಾನದಂಡ ದಶಕಗಳಿಂದ ಬದಲಾಗಿಲ್ಲ. ಪೂರೈಕೆದಾರರು ಎನ್‍ಎಬಿಎಲ್ ಪ್ರಮಾಣಪತ್ರ ಮತ್ತು ಉತ್ಪನ್ನ ಗುಣಮಟ್ಟದ ಪ್ರಮಾಣಪತ್ರವನ್ನು ನೀಡಬೇಕು. ಅದಾದ ಬಳಿಕ ಟಿಟಿಡಿ (TTD) ತುಪ್ಪದಿಂದ ಮಾದರಿಗಳನ್ನು ಸಂಗ್ರಹಿಸುತ್ತದೆ. ಬಳಿಕ ಪರಿಶೀಲಿಸಿದ ಉತ್ಪನ್ನಗಳನ್ನು ಮಾತ್ರ ಬಳಸಲಾಗುತ್ತದೆ ಎಂದು ಹೇಳಿದ್ದಾರೆ.
ದೇವಾಲಯಕ್ಕೆ ಲಡ್ಡು ತಯಾರಿಕೆಗಾಗಿ ಸಾಮಗ್ರಿಗಳನ್ನು ಒದಗಿಸಲು ಪ್ರತಿ ಆರು ತಿಂಗಳಿಗೊಮ್ಮೆ ಟೆಂಡರ್ ಪ್ರಕ್ರಿಯೆ ನಡೆಯುತ್ತದೆ. ಈ ವೇಳೆ ಅಗತ್ಯ ದಾಖಲೆಗಳನ್ನು ಹಾಗೂ ಗುಣಮಟ್ಟದ ಪ್ರಮಾಣ ಪತ್ರವನ್ನು ಒದಗಿಸಿ ಟೆಂಡರ್ ಪಡೆಯಬೇಕು. ನಮ್ಮ ಆಡಳಿತದಲ್ಲಿ ನಾವು 18 ಬಾರಿ ಉತ್ಪನ್ನಗಳನ್ನು ತಿರಸ್ಕರಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಚಂದ್ರಬಾಬು ನಾಯ್ಡು ವಿರುದ್ಧ ಕಿಡಿಕಾರಿದ ಜಗನ್, ಅವರು ಎಲ್ಲವನ್ನೂ ತಿರುಚಿ ಮಾತನಾಡುತ್ತಿದ್ದಾರೆ. ಲಡ್ಡು ಬಗೆಗಿನ ಎಲ್ಲಾ ಆರೋಪಗಳು ಸುಳ್ಳು. ನಮ್ಮ ಸರ್ಕಾರದ ಅವಧಿಯಲ್ಲಿ ಯಾವುದೇ ಉಲ್ಲಂಘನೆ ಆಗಿಲ್ಲ. ಡೈವರ್ಸನ್ ಪಾಲಿಟಿಕ್ಸ್ ಬಗ್ಗೆ ಆಶ್ಚರ್ಯವಾಗುತ್ತಿದೆ. ಚಂದ್ರಬಾಬು ನಾಯ್ಡು ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಜಗನ್ ಹೇಳಿದ್ದಾರೆ.
ತಿರುಮಲವನ್ನು ರಾಜಕೀಯ ಮೈಲೇಜ್ ಪಡೆಯಲು ಬಳಸಿಕೊಳ್ಳುತ್ತಿದ್ದಾರೆ. ರಾಜಕೀಯಕ್ಕಾಗಿ ದುಷ್ಟಮಾರ್ಗ ಹಿಡಿದಿದ್ದಾರೆ. ದೇವರ ಹೆಸರಿನಲ್ಲಿ ಸುಳ್ಳು ಹೇಳುತ್ತಿದ್ದಾರೆ. ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಬಳಕೆ ಎಂಬುದು ಕಟ್ಟು ಕಥೆ. ಇಂತಹ ಮಾರ್ಗ ಹಿಡಿಯುವುದು ಸರಿಯಲ್ಲ. ಜನರ ನಂಬಿಕೆಯ ವಿಷಯದಲ್ಲೂ ಪಾಲಿಟಿಕ್ಸ್ ಮಾಡುತ್ತಿದ್ದಾರೆ.
ತಿರುಪತಿ ಲಡ್ಡುವಿನಲ್ಲಿ ಎಂದೂ ಕೂಡ ಪ್ರಾಣಿಯ ಕೊಬ್ಬು ಬಳಸಿಲ್ಲ. ಇದು ಮುಖ್ಯಮಂತ್ರಿಯಾಗಿ ಇರುವವರು ಆಡುವಂಥ ಮಾತೇ. ಅಸಂಬದ್ಧ ಮಾತು ಆಡುವುದು ಧರ್ಮವೇ? ಇದು ನಾಚಿಕೆಗೇಡು. ವೆಂಕಟೇಶ್ವರ ಸ್ವಾಮಿ ಭಕ್ತರು ಜಗತ್ತಿನಾದ್ಯಂತ ಇದ್ದಾರೆ. ಇದ್ಯಾವುದು ಸಣ್ಣ ಕಾರ್ಯಕ್ರಮವಲ್ಲ. ಲಡ್ಡು, ಅದರಲ್ಲಿ ಬಳಸುವ ವಸ್ತುಗಳನ್ನು ದಶಕದಿಂದ ಖರೀದಿಸಲಾಗುತ್ತಿದೆ. ಲಡ್ಡುಗೆ ಪೂರೈಸುವ ವಸ್ತುಗಳ ಟ್ಯಾಂಕರ್‌ಗಳನ್ನು NABL (ನ್ಯಾಷನಲ್ ಅಕ್ರೆಡಿಟೇಷನ್ ಆಫ್ ಬೋರ್ಡ್ ಆಫ್ ಲ್ಯಾಬ್) ನಿಂದ ಪರೀಕ್ಷಿಸಲಾಗುತ್ತೆ. NABL ಪರೀಕ್ಷೆ ಕಡ್ಡಾಯ ಪ್ರಕ್ರಿಯೆ. ಮೂರು ಟೆಸ್ಟ್ ಪಾಸ್ ಆದ ಬಳಿಕವಷ್ಟೇ ಪ್ರಸಾದದಲ್ಲಿ ಬಳಸಲಾಗುತ್ತೆ. ಲ್ಯಾಬ್ ಟೆಸ್ಟ್‌ನಲ್ಲಿ ತಿರಸ್ಕೃತವಾದದ್ದನ್ನು ಬಳಸುವ ಪ್ರಶ್ನೆಯೇ ಇಲ್ಲ. ಇಂತಹ ಅಸಂಬದ್ಧ ಮಾತನಾಡುವುದು ನ್ಯಾಯವೇ, ಧರ್ಮವೇ? ಚಂದ್ರಬಾಬು ನಾಯ್ಡು ದೇವರ ಹೆಸರಿನಲ್ಲಿ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಜನರ ಭಾವನೆಗಳ ಜೊತೆ ಆಟವಾಡುತ್ತಿದ್ದಾರೆ ಎಂದು ಜಗನ್ ಕಿಡಿಕಾರಿದ್ದಾರೆ.