ಹೊಸದಿಗಂತ ವರದಿ,ಬೆಂಗಳೂರು:
ನಿಷೇಧಿತ ಭಯೋತ್ಪಾದಕ ಸಂಘಟನೆಯಾಗಿರುವ ಐಸಿಸ್‌ಗೆ ಬೆಂಬಲ ಸೂಚಿಸಿ ಟ್ವಿಟರ್ (ಎಕ್ಸ್) ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ಕೈಗೊಂಡು ಉಗ್ರ ಸಂಘಟನೆಗೆ ಸದಸ್ಯರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದ ಆರೋಪದಡಿ ದೇಶದಲ್ಲೇ ಮೊದಲ ಬಾರಿಗೆ ಐಟಿ ಕಾಯ್ದೆಯಡಿ ದಾಖಲಾದ ಪ್ರಕರಣದಲ್ಲಿ ಬಂಧನಕ್ಕೊಳಗಾದ ಪಶ್ಚಿಮ ಬಂಗಾಳದ ಕೋಲ್ಕತಾ ಮೂಲದ ಮೆಹದಿ ಮನ್ಸೂರ್ ಬಿಸ್ವಾಸ್(34)ನನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ದ ವಿಶೇಷ ನ್ಯಾಯಾಲಯ ಆತನಿಗೆ ಹತ್ತು ವರ್ಷ ಕಾರಾಗೃಹ ಶಿಕ್ಷೆ ಮತ್ತು 2.15 ಲಕ್ಷ ರೂ ದಂಡ ವಿಧಿಸಿ ಆದೇಶಿಸಿದೆ.
ಮೆಹದಿ ಮನ್ಸೂರ್ ಬಿಸ್ವಾಸ್ ಎಲೆಕ್ಟಿಕಲ್ ಇಂಜಿನಿಯರ್ ಆಗಿದ್ದು ನಗರದಲ್ಲಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈ ಮಧ್ಯೆ ನಿಷೇಧಿತ ಐಸಿಸ್ ಸಂಘಟನೆಯ ಮುಖಂಡ ಅಬೂಬಕ್ಕರ್ ಬಾಗ್ದಾದಿ ಸೂಚನೆ ಮೇರೆಗೆ ಬಿಸ್ವಾಸ್, 2014ರ ಅವಧಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಐಸಿಸ್ ಪರ ಪ್ರಚಾರ ಮಾಡುತ್ತಿದ್ದ. ಅದಕ್ಕೆಂದು ಪ್ರತ್ಯೇಕವಾಗಿ ಶಮ್ಮಿ ವಿಟೆಸ್ ಎಂಬ ಟ್ವಿಟರ್ ಖಾತೆ ತೆರೆದು, ಹಲವಾರು ಸದಸ್ಯರನ್ನು ನೇಮಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದನು.
ಶಮ್ಮಿವಿಟೆಸ್ ನಿರ್ವಾಹಕ ಬೆಂಗಳೂರಿನಲ್ಲಿರುವುದು ಪತ್ತೆಯಾಗಿರುವ ಮಾಹಿತಿ ಮೇರೆಗೆ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು, 2014ರ ಡಿ.13ರಂದು ಸಿಸಿಬಿಯ ಅಂದಿನ ಎಸಿಪಿ ಎಂ.ಕೆ.ತಿಮ್ಮಯ್ಯ ನೇತೃತ್ವದಲ್ಲಿ ತಂಡ ಗಂಗಮ್ಮನಗುಡಿಯಲ್ಲಿರುವ ಆತನ ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆಸಿ ಬಂಧಿಸಿ, ಆರೋಪಿ ಮೆಹದಿ ಮೆಟ್ರೊಸ್ ಕೃತ್ಯಕ್ಕೆ ಬಳಸಿದ್ದ ಲ್ಯಾಪ್‌ಟಾಪ್ ಹಾಗೂ ಇತರೆ ಎಲೆಕ್ನಿಕ್ ವಸ್ತುಗಳು ಹಾಗೂ ಆತನು ಕೃತ್ಯವೆಸಗಿರುವ ಬಗ್ಗೆ ದಾಖಲೆಗಳ ಜತೆಗೆ ಅಮೇರಿಕಾದಲ್ಲಿರುವ ಟ್ವಿಟರ್ ಸಂಸ್ಥೆಯಿಂದ ದಾಖಲಾತಿಗಳನ್ನು ಸಂಗ್ರಹಿಸಿದ್ದರು. ಬಳಿಕ ಆತನ ವಿರುದ್ಧ ಬರೋಬ್ಬರಿ 37 ಸಾವಿರ ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದರು. ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಹಾಗೂ ಇತರೆ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ತಪ್ಪಿತಸ್ಥ ಎಂಬುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ ಮೆಹದಿ ಮಸೂರ್‌ನನ್ನು ದೋಷಿ ಎಂದು ಘೋಷಣೆ ಮಾಡಿರುವ ನ್ಯಾಯಾಲಯ ಶುಕ್ರವಾರ ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.
ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕರಾಗಿ ಬಿಕ್ಕಣ್ಣನವರ್ ವಾದ ಮಂಡಿಸಿದರು. ಸಿಸಿಬಿ ಎಟಿಸಿ ವಿಭಾಗದ ಎಸಿಪಿ ಬಿ. ಆರ್. ವೇಣುಗೋಪಾಲ್ ಮತ್ತು ತಂಡ ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಮುಖ್ಯ ಪಾತ್ರವಹಿಸಿದೆ.