ಹೊಸದಿಗಂತ ವರದಿ ಮಡಿಕೇರಿ:
ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕನೆಂದು ಹೇಳಿಕೊಂಡು ಕಂದಾಯ ನಿರೀಕ್ಷಕರೊಬ್ಬರನ್ನು ವಂಚಿಸಲೆತ್ನಿಸಿದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರು ನಿವಾಸಿಗಳಾದ ರಘುನಾಥ (34) ಮತ್ತು ಶಿವಮೂರ್ತಿ (35 ) ಬಂಧಿತ ಆರೋಪಿಗಳು.
ಕುಶಾಲನಗರ ತಾಲೂಕಿನ ಕಂದಾಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕುಶಾಲನಗರದ ಹೆಚ್.ಎನ್. ಸಂತೋಷ್ ಎಂಬುವರಿಗೆ ನ.19ರ ರಾತ್ರಿ 9 ಗಂಟೆ ಸುಮಾರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ತಾನು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ಎಂದು ಹೇಳಿಕೊಂಡು ತನಗೆ ತುರ್ತಾಗಿ 20 ಸಾವಿರ ರೂ.ಗಳ ಅಗತ್ಯವಿದ್ದು, ಗೂಗಲ್ ಪೇ ಮೂಲಕ ಹಣ ಕಳುಹಿಸುವಂತೆ ಹಾಗೂ ಹಣವನ್ನು ಆದಷ್ಟು ಬೇಗ ಹಿಂದಿರುಗಿಸುವುದಾಗಿ ಹೇಳಿದ್ದಾನೆ ಎಂದು ಹೇಳಲಾಗಿದೆ.
ಸಚಿವರ ಆಪ್ತ ಸಹಾಯಕನಿರಬಹುದೆಂದು ನಂಬಿದ ಸಂತೋಷ್, ಆ ವ್ಯಕ್ತಿಗೆ ಗೂಗಲ್ ಪೇ ಮೂಲಕ ಹಣ ಕಳುಹಿಸಿದ್ದು, ನ.20ರಂದು ಸಚಿವರ ಕಚೇರಿಯಲ್ಲಿ ವಿಚಾರಿಸಿದಾಗ ಮೋಸ ಹೋಗಿರುವುದು ಬಯಲಾಗಿದೆ.
ಈ ಕುರಿತು ದೊರೆತ ದೂರಿನ ಅನ್ವಯ ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ವೃತ್ತ ನಿರೀಕ್ಷಕ ಬಿ.ಜಿ.ಪ್ರಕಾಶ್ ಕುಶಾಲನಗರ ನಗರ ಪಿಎಸ್ಐ ಗೀತಾ, ಸಂಚಾರಿ ಪೊಲೀಸ್ ಠಾಣಾಧಿಕಾರಿ ಕಾಶಿನಾಥ ಬಗಲಿ ಮತ್ತು ಸಿಬ್ಬಂದಿಗಳು ತನಿಖೆ ನಡೆಸಿ ಅರೋಪಿಗಳನ್ನು ಬಂಧಿಸಿದ್ದಾರೆ.
ಸಚಿವರ ಆಪ್ತಸಹಾಯಕರು ಅಥವಾ ಕಚೇರಿ ಹೆಸರಿನಲ್ಲಿ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ವ್ಯಕ್ತಿಗಳ ಮೇಲೆ ಸೂಕ್ತ ಕಠಿಣ ಕ್ರಮ ಕೈಗೊಳ್ಳುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಕಾರಿಯವರಿಗೆ ಸೂಚನೆ ನೀಡಿದ್ದು, ಅಂತಹ ವ್ಯಕ್ತಿಗಳ ಕುರಿತು ಮಾಹಿತಿ ಇದ್ದಲ್ಲಿ ಸ್ಥಳೀಯ ಪೊಲೀಸ್ ಠಾಣೆ/ ತುರ್ತು ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಅಥವಾ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಕೋರಿದ್ದಾರೆ.