ಹೊಸದಿಗಂತ ವರದಿ ಕಾರವಾರ:
ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಬೈಕುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಹೊನ್ನಾವರ ತಾಲೂಕಿನ ಮಂಕಿ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಅವರಿಂದ 14 ಬೈಕುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮನೆಗಳಿಗೆ ಟೈಲ್ಸ್ ಹಾಕುವ ಕೆಲಸ ನಿರ್ವಹಿಸುವ ಕಲಘಟಗಿ ಗಾಂಧಿನಗರ ನಿವಾಸಿ ಹಾಲಿ ಹುಬ್ಬಳ್ಳಿಯಲ್ಲಿ ವಾಸವಾಗಿದ್ದ ಜೈಲಾನಿ ಭಾಷಾಸಾಬ್ ಗಂಜಿಗಟ್ಟಿ (23 ) ಮತ್ತು ಧಾರವಾಡ ಕುಂದಗೋಳ ನಿವಾಸಿ ರವಿಚಂದ್ರ ಶಿವಪ್ಪ ತಳವಾರ (27) ಬಂಧಿತ ಆರೋಪಿಗಳು.
ಉಡುಪಿಯಲ್ಲಿ ಟಿ.ವಿ.ಎಸ್ ರೈಡರ್ ಬೈಕ್ ಕಳ್ಳತನ ಮಾಡಿ ಬರುತ್ತಿದ್ದ ಸಂದರ್ಭದಲ್ಲಿ ಮಂಕಿಯಲ್ಲಿ ಪಿ.ಎಸ್. ಐ ಭರತಕುಮಾರ ಸಂಶಯದಲ್ಲಿ ತಡೆದು ನಿಲ್ಲಿಸಿದಾಗ ಬೈಕ್ ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಅವರನ್ನು ತಡೆದು ವಿಚಾರಣೆ ನಡೆಸಿದಾಗ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಮುರುಡೇಶ್ವರ, ಮಂಕಿ, ಧಾರವಾಡ ಜಿಲ್ಲೆಯ ಕಲಘಟಗಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮತ್ತಿಬ್ಬರು ಆರೋಪಿಗಳಾದ ಕುಂದಗೋಳ ನಿವಾಸಿ ಸಲ್ಮಾನ್ ಇಮಾಮಸಾಬ್ ತಹಶೀಲ್ಧಾರ ಮತ್ತು ಜಗದೀಶ ಕೊಟೆಪ್ಪ ಬಂಡಿವಾಡ ಅವರೊಂದಿಗೆ ಸೇರಿ 14 ಬೈಕುಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಆರೋಪಿಗಳಿಂದ ಕಳುವು ಮಾಡಲಾಗಿದ್ದ ಸುಮಾರು 8.35 ಲಕ್ಷ ಮೌಲ್ಯದ 14 ಬೈಕುಗಳನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿತರ ಮೇಲೆ ಕಲಘಟಗಿ, ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.
ಜಿಲ್ಲಾ ಪೊಲೀಸ್ ವರಿಷ್ಠ ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ, ಭಟ್ಕಳ ಡಿ.ವೈ.ಎಸ್. ಪಿ ಕೆ.ಶ್ರೀಕಾಂತ ಮಾರ್ಗದರ್ಶನದಲ್ಲಿ ಭಟ್ಕಳ ಗ್ರಾಮಾಂತರ ಸಿ.ಪಿ.ಐ ಚಂದಗೋಪಾಲ ನೇತೃತ್ವದಲ್ಲಿ ಮಂಕಿ ಪಿ.ಎಸ್. ಐ ಭರತಕುಮಾರ, ಮುಶಾಹಿದ್ ಅಹ್ಮದ್ ಮತ್ತು ಸಿಬ್ಬಂದಿಗಳ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳಿಂದ ಕಳ್ಳತನದ ಬೈಕುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.