ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ಇಬ್ಬರು ಯುವಕರು ಭಾರತ ಮತ್ತು ಚೀನಾ ಗಡಿ ಪ್ರದೇಶದಲ್ಲಿ ನಾಪತ್ತೆಯಾಗಿದ್ದಾರೆ. ಕಳೆದ 56 ದಿನಗಳಿಂದ ಅವರು ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ. ಅವರು ಕಾಡಿನ ಗಿಡಮೂಲಿಕೆಗಳನ್ನು ಸಂಗ್ರಹಿಸಲು ಗುಡ್ಡಗಾಡು ಪ್ರದೇಶಗಳಿಗೆ ಹೋಗಿ ನಿಯಂತ್ರಣ ರೇಖೆಯನ್ನು ದಾಟಿದ್ದಾರೆಂದು ಹೇಳಲಾಗುತ್ತಿದೆ. ಯುವಕರಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಯುವಕರ ಹೆಸರು ಬತೇಲಂ ಟಿಕ್ರೋ ಮತ್ತು ಬೀಂಗ್ಸೋ ಮನ್ಯು ಎಂದು ಪೊಲೀಸರು ತಿಳಿಸಿದ್ದಾರೆ. ಮಕ್ಕಳು ನಾಪತ್ತೆಯಾಗಿದ್ದಾರೆಂದು ಅವರ ಪೋಷಕರು ಇದೇ ತಿಂಗಳ 9 ರಂದು ದೂರು ದಾಖಲಿಸಿದ್ದರು.
ಈ ಬಗ್ಗೆ ಭಾರತೀಯ ಸೇನೆಯೊಂದಿಗೆ ಮಾತುಕತೆ ನಡೆಸಿದ ಅಧಿಕಾರಿಗಳು ಯುವಕರ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಆ.19 ರಂದು ಚಗ್ಲಗಾಮ್ ಪ್ರದೇಶಕ್ಕೆ ಹೋಗಿದ್ದರು ಎಂದು ಪೋಷಕರು ಹೇಳಿದ್ದಾರೆ. ಹಿಂತಿರುಗಿ ಬಾರದ ಕಾರಣ ಹುಡುಕಾಡಿದರೂ ಪತ್ತೆಯಾಗದ ಕಾರಣ ಪೊಲೀಸರಿಗೆ ದೂರು ನೀಡಿದ್ದಾರೆ. ಯುವಕರು ಚೀನಾ ಪ್ರದೇಶವನ್ನು ಪ್ರವೇಶಿಸಿರುವ ಶಂಕೆ ವ್ಯಕ್ತವಾಗಿದ್ದು, ಇವರನ್ನು ಚೀನಾ ಸೈನಿಕರು ವಶಕ್ಕೆ ಪಡೆದಿರಬಹುದು ಎನ್ನಲಾಗಿದೆ.