ಹೊಸ ದಿಗಂತ ವರದಿ, ಮಡಿಕೇರಿ:
ಆನೆ ದಿನದಂದೇ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸಾಕಾನೆ ಶಿಬಿರದಲ್ಲಿ ತರಬೇತಿ ಪಡೆಯುತ್ತಿದ್ದ ಆನೆ ಸಾವಿಗೀಡಾಗಿರುವ ಘಟನೆ ನಡೆದಿದೆ.
ಕಳೆದ ಮೂರು ತಿಂಗಳ ಹಿಂದೆ ದಕ್ಷಿಣಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ವಲಯ ಅರಣ್ಯ ಪ್ರದೇಶದಲ್ಲಿ ಒಂದೇ ದಿನ ಇಬ್ಬರ ಸಾವಿಗೆ ಕಾರಣವಾಗಿದ್ದ ಕಾಡಾನೆಯನ್ನು ಸೆರೆ ಹಿಡಿದು ನಾಗರಹೊಳೆ ಉದ್ಯಾನವನದ ಮತ್ತಿಗೋಡು ವಲಯದ ಕಂಠಾಪುರ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಿ ಕ್ರಾಲ್‌ನಲ್ಲಿಡಲಾಗಿತ್ತು. ಸುಬ್ರಹ್ಮಣ್ಯ ವಲಯದಲ್ಲಿ ಸೆರೆ ಸಿಕ್ಕಿದ್ದರಿಂದಾಗಿ ಆ ಆನೆಗೆ ಸುಬ್ರಹ್ಮಣ್ಯನೆಂದು ನಾಮಕರಣ ಮಾಡಲಾಗಿತ್ತು.
ಹೆಚ್ಚಿನ ತರಬೇತಿಗಾಗಿ ಜು.20ರಂದು ಕ್ರಾಲ್‌ನಿಂದ ಬಂಧಮುಕ್ತಗೊಳಿಸಿ ಮಾವುತ ಶಿವು, ಕವಾಡಿ ಚಂದ್ರ ಅವರ ಉಸ್ತುವಾರಿಯಲ್ಲಿ ತರಬೇತಿ ನೀಡಲಾಗುತ್ತಿತ್ತು.
ಆನೆ ಶಿಬಿರದಲ್ಲಿ ತರಬೇತಿ ಪಡೆಯುತ್ತಿದ್ದ ಸುಬ್ರಹ್ಮಣ್ಯ ಶುಕ್ರವಾರ (ಆ.11) ಮಲಗಿದಲ್ಲೇ ಅಸ್ಪಸ್ಥಗೊಂಡಿದ್ದ. ನಾಗರಹೊಳೆ ಪಶುವೈದ್ಯ ಡಾ.ರಮೇಶ್ ಚಿಕಿತ್ಸೆ ನೀಡಿದರಾದರೂ ಮೇಲೇಳಿಸುವ ಪ್ರಯತ್ನ ಸಫಲವಾಗದೆ ಕ್ರೇನ್ ತರಿಸಿ ಎದ್ದು ನಿಲ್ಲಿಸುವ ಯತ್ನವೂ ವಿಫಲವಾಗಿ ಅಂದೇ ಸಂಜೆ ವೇಳೆಗೆ ಮೃತಪಟ್ಟಿದೆ ಎಂದು ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.
ಆನೆ ಶವ ಪರೀಕ್ಷೆ: ಶನಿವಾರದಂದು ಹುಣಸೂರು ವನ್ಯಜೀವಿ ಉಪ ವಿಭಾಗದ ಪಶುವೈದ್ಯಾಧಿಕಾರಿ ಡಾ.ಚೆಟ್ಟಿಯಪ್ಪ, ದುಬಾರೆ ಶಿಬಿರದ ಪಶುವೈದ್ಯ ಡಾ.ಮದನ್ ಗೋಪಾಲ್, ಮೈಸೂರು ಲೀಲಾಪೆಟ್ ಆಸ್ಪತ್ರೆಯ ಡಾ.ಎಚ್.ರಮೇಶ್, ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ, ಎಸಿಎಫ್ ದಯಾನಂದ, ಆರ್.ಎಫ್.ಓ. ದಿಲೀಪ್‌ಕುಮಾರ್ ಸಮ್ಮುಖದಲ್ಲಿ ಸುಬ್ರಹ್ಮಣ್ಯ ಆನೆಯ ಶವ ಪರೀಕ್ಷೆ ನಡೆಸಿದರು.
ಬಹು ಅಂಗಾಂಗ ವೈಫಲ್ಯದಿಂದ ಸಾವು: ಆನೆಯು ಬಹು ಅಂಗಾಂಗ ವೈಫಲ್ಯ ಕಾಯಿಲೆ(ಆರ್ಥಿಟಿಸ್)ಯಿಂದ ಸೆಪ್ಟಿಸೀಮಿಯಾ (ಇನ್‌ಫೆಕ್ಷನ್)ನಿಂದ ಬಳಲಿ ಮೃತಪಟ್ಟಿರುವುದಾಗಿ ಪಶುವೈದ್ಯರ ತಂಡ ಮಾಹಿತಿ ನೀಡಿದ್ದು, ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಆನೆಯ ಶವವನ್ನು ಹೂತಿರುವುದಾಗಿ ಡಿಸಿಎಫ್ ಮಾಹಿತಿ ನೀಡಿದ್ದಾರೆ.