ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಲೋಕದ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಭಾನುವಾರ ಮುಖಾಮುಖಿಯಾಗುತ್ತಿದ್ದು, ಅಭಿಮಾನಿಗಳಿಗೆ ಒಂದೇ ದಿನ ಎರಡು ಪಂದ್ಯಗಳನ್ನು ಸವಿಯುವ ಅಪರೂಪದ ಅವಕಾಶ ಒದಗಿದೆ.
ಶ್ರೀಲಂಕಾದ ಕೊಲಂಬೊದಲ್ಲಿರುವ ಐತಿಹಾಸಿಕ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಸಂಜೆ 7 ಗಂಟೆಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.
ಆಡಿರುವ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ದಾಖಲಿಸಿರುವ ಭಾರತ, +3.050 ರನ್ ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ನೆದರ್ಲ್ಯಾಂಡ್ಸ್ ಮತ್ತು ಯುಎಸ್ಎ ವಿರುದ್ಧ ಗೆಲುವು ಸಾಧಿಸಿರುವ ಪಾಕ್, 4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಈ ಪಂದ್ಯವು ಗ್ರೂಪ್ ಹಂತದ ಅಗ್ರಸ್ಥಾನಕ್ಕಾಗಿ ನಡೆಯುವ ನಿರ್ಣಾಯಕ ಹೋರಾಟವಾಗಿದೆ.
ಅದೇ ದಿನ ಮಧ್ಯಾಹ್ನ 12:30ಕ್ಕೆ ಬ್ಯಾಂಕಾಕ್‌ನ ಟೆರ್ಡ್‌ಥೈ ಕ್ರೀಡಾಂಗಣದಲ್ಲಿ ಭಾರತ ‘ಎ’ ಮತ್ತು ಪಾಕಿಸ್ತಾನ ‘ಎ’ ಮಹಿಳಾ ತಂಡಗಳು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಆಯೋಜಿಸಿರುವ ‘ರೈಸಿಂಗ್ ಸ್ಟಾರ್ಸ್’ ಟೂರ್ನಿಯಲ್ಲಿ ಸೆಣಸಾಡಲಿವೆ. ಯುವ ಪ್ರತಿಭೆಗಳಿಗೆ ವೇದಿಕೆಯಾಗಿರುವ ಈ ಟೂರ್ನಿಯಲ್ಲಿ ಭಾರತ ‘ಎ’ ತಂಡವು ಪಾಕಿಸ್ತಾನ, ಯುಎಇ ಮತ್ತು ನೇಪಾಳದೊಂದಿಗೆ ಗ್ರೂಪ್ ‘ಎ’ ನಲ್ಲಿದೆ.



