March 13, 2026
Friday, March 13, 2026
spot_img

ಸನ್ನಡತೆ ಮೆರೆದ ಇಬ್ಬರು ಕೈದಿಗಳಿಗೆ ಕಲಬುರಗಿ ಕೇಂದ್ರ ಕಾರಾಗೃಹದಿಂದ ಮುಕ್ತಿ

ಹೊಸದಿಗಂತ ಕಲಬುರಗಿ:

ಕರ್ನಾಟಕ ಸರ್ಕಾರದ ವಿಶೇಷ ಆದೇಶ ಹಾಗೂ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಪೊಲೀಸ್ ಮಹಾನಿರ್ದೇಶಕರ ಸೂಚನೆಯನ್ವಯ, ಇಲ್ಲಿನ ಕೇಂದ್ರ ಕಾರಾಗೃಹದ ಇಬ್ಬರು ಶಿಕ್ಷಾ ಬಂದಿಗಳನ್ನು ಸನ್ನಡತೆಯ ಆಧಾರದ ಮೇಲೆ ಶುಕ್ರವಾರ ಬಿಡುಗಡೆ ಮಾಡಲಾಯಿತು.

ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಸ.ಬಂ ಸಂಖ್ಯೆ 1258ರ ಸುಭಾಷ @ ಸುಬ್ಬಣ್ಣ ಹಾಗೂ ಸ.ಬಂ ಸಂಖ್ಯೆ 51ರ ಜಯಮ್ಮ @ ಪದ್ಮಾ ಅವರು ಜೈಲಿನ ನಿಯಮಗಳನ್ನು ಪಾಲಿಸಿ, ಉತ್ತಮ ನಡವಳಿಕೆ ತೋರಿದ ಹಿನ್ನೆಲೆಯಲ್ಲಿ ಅವಧಿಗೂ ಮುನ್ನವೇ ಬಿಡುಗಡೆ ಭಾಗ್ಯ ಪಡೆದಿದ್ದಾರೆ.

ಬಿಡುಗಡೆಯ ಸಂದರ್ಭದಲ್ಲಿ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಕೆ. ಸುರೇಶ್ ಅವರು ಬಂದಿಗಳಿಗೆ ಬಿಡುಗಡೆ ಪ್ರಮಾಣ ಪತ್ರ ಹಾಗೂ ಸಿಹಿ ನೀಡಿ ಅಭಿನಂದಿಸಿದರು. ಈ ವೇಳೆ ಮಾತನಾಡಿದ ಅವರು, “ಹಳೆಯ ಕಹಿ ಘಟನೆಗಳನ್ನು ಮರೆತು, ಸಮಾಜದಲ್ಲಿ ಸತ್ಪ್ರಜೆಗಳಾಗಿ ಬದುಕಬೇಕು. ಕುಟುಂಬದೊಂದಿಗೆ ಬೆರೆತು ಸಮಾಜಮುಖಿ ಕಾರ್ಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ,” ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧೀಕ್ಷಕ ರಾಕೇಶ್ ಕಾಂಬ್ಳೆ, ಸಹಾಯಕ ಅಧೀಕ್ಷಕರಾದ ಸುರೇಶ್ ಬಿ., ಚನ್ನಪ್ಪ ಯಟಗಾಲ್, ಜೈಲರ್‌ಗಳಾದ ಸಾಗರ್ ಪಾಟೀಲ್, ಶ್ರೀಮಂತಗೌಡ ಪಾಟೀಲ್, ಶಿಕ್ಷಕ ನಾಗರಾಜ ಮೂಲಗೆ ಹಾಗೂ ಕಾರಾಗೃಹದ ಇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ಬಿಡುಗಡೆಗೊಂಡವರಿಗೆ ಶುಭ ಕೋರಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !