ಹೊಸದಿಗಂತ ವರದಿ ಮಡಿಕೇರಿ:
ಹುಣಸೂರು- ಗೋಣಿಕೊಪ್ಪ ರಾಜ್ಯ ಹೆದ್ದಾರಿಯ ತಿತಿಮತಿ ಬಳಿ ಭಾನುವಾರ ತಡರಾತ್ರಿ ಜೀಪು ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಭಾನುವಾರ ರಾತ್ರಿ 10.30ರ ಸುಮಾರಿಗೆ ಬೈಕ್’ನಲ್ಲಿ ಮನೆಗೆ ಮರಳುತ್ತಿದ್ದ ಸಣ್ಣುವಂಡ ಜಯ(43) ಹಾಗೂ ಸನತ್ (26) ಅವರಿದ್ದ ಬೈಕ್’ಗೆ ತಿತಿಮತಿ ಸಮೀಪದ ಭದ್ರಗೋಳ ಎಂಬಲ್ಲಿ ರಸ್ತೆಯ ಇಳಿಜಾರಿನಲ್ಲಿ ಹಿಂಬದಿಯಿಂದ ಬಂದ ಜೀಪು ಡಿಕ್ಕಿಯಾಗಿದೆ. ಪರಿಣಾಮವಾಗಿ ಬೈಕ್’ನಲ್ಲಿದ್ದ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಸಾವಿಗೀಡಾಗಿರುವುದಾಗಿ ಹೇಳಲಾಗಿದೆ.
ಕಳೆದ ವಾರ ಇದೇ ರಸ್ತೆಯಲ್ಲಿ ಕೆ.ಎಸ್ ಆರ್.ಟಿ. ಸಿ.ಬಸ್ಸೊಂದು ರಸ್ತೆಯಲ್ಲಿನ ಗುಂಡಿ ತಪ್ಪಿಸಲು ಹೋಗಿ ಮರಕ್ಕೆ ಡಿಕ್ಕಿಯಾಗಿದ್ದು, ಬಸ್ ಚಾಲಕನ ಕಾಲು ಮುರಿದಿದ್ದರೆ, ಇತರ 16 ಮಂದಿ ಗಾಯಗೊಂಡಿದ್ದರು.
ಘಟನಾ ಸ್ಥಳಕ್ಕೆ ಗೋಣಿಕೊಪ್ಪ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.