ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾ ಬರೋಬ್ಬರಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿದೆ. ಇದರ ಜತೆಗೆ ಟೀಂ ಇಂಡಿಯಾ ಹೆಡ್‌ಕೋಚ್ ರಾಹುಲ್ ದ್ರಾವಿಡ್ ಅವರ ಜತೆಗಿನ ಬಿಸಿಸಿಐ ಒಪ್ಪಂದ ಕೂಡಾ ಮುಕ್ತಾಯವಾಗಿದೆ.
ಹೀಗಿರುವಾಗಲೇ ಬಿಸಿಸಿಐ ಕಾರ್ಯದರ್ಶಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಭವಿಷ್ಯದ ಹೆಡ್ ಕೋಚ್ ಕುರಿತಾಗಿ ಅಚ್ಚರಿಯ ಹೇಳಿಕೆಯೊಂದನ್ನು ನೀಡಿ ಸುದ್ದಿಯಾಗಿದ್ದಾರೆ.
ತಾವು 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮುಗಿದ ಬಳಿಕ ಮತ್ತೆ ಟೀಂ ಇಂಡಿಯಾ ಹೆಡ್‌ಕೋಚ್ ಆಗಿ ಮುಂದುವರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಹೀಗಾಗಿಯೇ ಬಿಸಿಸಿಐ ಕಳೆದ ಜೂನ್ 13ರಂದು ಭಾರತ ತಂಡದ ನೂತನ ಹೆಡ್ ಕೋಚ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿತ್ತು.
ಇದೀಗ ಇಂದು ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಟೀಂ ಇಂಡಿಯಾ ನೂತನ ಹೆಡ್ ಕೋಚ್ ಹುದ್ದೆಗೆ ಇಬ್ಬರ ಹೆಸರನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದ್ದು, ಸದ್ಯದಲ್ಲಿಯೇ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಈಗಾಗಲೇ ಕೆಲವು ಮಾಧ್ಯಮ ವರದಿಗಳ ಪ್ರಕಾರ, ರಾಹುಲ್ ದ್ರಾವಿಡ್ ಕೋಚ್ ಹುದ್ದೆಯಿಂದ ಕೆಳಗಿಳಿದ ಬಳಿಕ ಆ ಸ್ಥಾನವನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ತುಂಬಲಿದ್ದಾರೆ ಎಂದು ವರದಿಯಾಗಿದೆ. ಕೆಲ ತಿಂಗಳ ಹಿಂದಷ್ಟೇ ನಡೆದ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಟೂರ್ನಿ ಆರಂಭಕ್ಕೂ ಮುನ್ನ ಗಂಭೀರ್, ಕೆಕೆಆರ್ ತಂಡದ ಮೆಂಟರ್ ಆಗಿ ನೇಮಕಗೊಂಡ ಬಳಿಕ ಹೊಸ ಹುರುಪಿನೊಂದಿಗೆ ಸಜ್ಜಾದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಟೂರ್ನಿಯುದ್ದಕ್ಕೂ ಅಭೂತಪೂರ್ವ ಪ್ರದರ್ಶನ ತೋರಿ ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿತ್ತು. ಇದರ ಬೆನ್ನಲ್ಲೇ ಗೌತಮ್ ಗಂಭೀರ್ ಅವರನ್ನೇ ಟೀಂ ಇಂಡಿಯಾ ಮುಂದಿನ ಹೆಡ್‌ಕೋಚ್ ಆಗಿ ನೇಮಕ ಮಾಡಲು ಬಿಸಿಸಿಐ ಕೂಡಾ ಒಲವು ತೋರಿದೆ ಎಂದೆಲ್ಲಾ ವರದಿಯಾಗುತ್ತಿವೆ.
ಇದೀಗ ಜಯ್ ಶಾ, ಶ್ರೀಲಂಕಾ ಎದುರಿನ ಸರಣಿಗೂ ಮುನ್ನ ಟೀಂ ಇಂಡಿಯಾ ನೂತನ ಕೋಚ್ ನೇಮಕವಾಗಲಿದ್ದಾರೆ ಎಂದು ಖಚಿತಪಡಿಸಿದ್ದಾರೆ.
ಸದ್ಯದಲ್ಲಿಯೇ ಟೀಂ ಇಂಡಿಯಾ ನೂತನ ಹೆಡ್‌ಕೋಚ್ ಹಾಗೂ ಆಯ್ಕೆ ಸಮಿತಿಯನ್ನು ನೇಮಕ ಮಾಡಲಾಗುವುದು. ಕ್ರಿಕೆಟ್ ಸಲಹಾ ಸಮಿತಿಯು ಈಗಾಗಲೇ ಇಬ್ಬರನ್ನು ಮುಂಬೈನಲ್ಲಿ ಸಂದರ್ಶನ ಮಾಡಿ ಶಾರ್ಟ್‌ಲಿಸ್ಟ್ ಮಾಡಿದೆ. ನಾವು ಮುಂಬೈಗೆ ತೆರಳಿದ ಬಳಿಕ ಅಂತಿಮ ಘೋಷಣೆ ಮಾಡಲಿದ್ದೇವೆ. ಸದ್ಯ ಜಿಂಬಾಬ್ವೆ ಎದುರಿನ ಸರಣಿಗೆ ವಿವಿಎಸ್ ಲಕ್ಷ್ಮಣ್ ಟೀಂ ಇಂಡಿಯಾ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದುತಿಳಿಸಿದ್ದಾರೆ.
ಸದ್ಯ ಜಯ್ ಶಾ, ಭಾರತ ತಂಡದೊಂದಿಗೆ ಬಾರ್ಬಡೊಸ್‌ನಲ್ಲಿದ್ದಾರೆ. ಇನ್ನು ಜಿಂಬಾಬ್ವೆ ಎದುರಿನ ಸರಣಿಯು ಜುಲೈ 06ರಿಂದ ಆರಂಭವಾಗಲಿದೆ.
ಇನ್ನು ಕೆಲ ಮಾಧ್ಯಮಗಳ ವರದಿಯ ಪ್ರಕಾರ, ಟೀಂ ಇಂಡಿಯಾ ಹೆಡ್ ಕೋಚ್ ಹುದ್ದೆಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಜತೆಗೆ ಡಬ್ಲ್ಯೂ ವಿ ರಾಮನ್ ಅವರ ಹೆಸರನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಇಬ್ಬರ ಪೈಕಿ ಯಾರ ಹೆಸರು ಫೈನಲ್ ಆಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.