ಹೊಸದಿಗಂತ ಡಿಜಿಟಲ್ ಡೆಸ್ಕ್:
ರೆಡಿಮೇಡ್ ಬಟ್ಟೆಗಳ ಪ್ಯಾಕ್ಗಳಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಗಳಿಬ್ಬರನ್ನು ಬೆಂಗಳೂರಿನ ರಾಜಾನುಕುಂಟೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 4.50 ಕೋಟಿ ರೂ. ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಲಾಸೊನ್ಯೆ ಪೀಟರ್ ಒಬಿಯೋಮಾ ಹಾಗೂ ಸಂಡೇ ವಿನ್ಡಮ್ ಎಂದು ಗುರುತಿಸಲಾಗಿದೆ.
ಇವರು ಮೆಡಿಕಲ್ ವಿಸಾದಲ್ಲಿ ದೆಹಲಿಗೆ ಬಂದಿದ್ದರು. ದೆಹಲಿಯಿಂದ ಬೆಂಗಳೂರಿನ ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂದು ನೆಲೆಸಿದ್ದರು. ಬೇರೆಯವರ ಹೆಸರಲ್ಲಿ ಮನೆ ಬಾಡಿಗೆ ಪಡೆದು ಏರ್ಪೋರ್ಟ್ ಬಳಿ ಸೆಕ್ಯೂರಿಟಿಗಳು ಹಾಕುವಂತೆ ಮನೆ ಬಳಿ ಬಟ್ಟೆ ಹಾಕಿಕೊಂಡು ತಿರುಗಾಡುತಿದ್ದರು. ಅಲ್ಲದೆ, ಡ್ರಗ್ ಪೆಡ್ಲಿಂಗ್ ಮಾಡಬೇಕು ಎಂದು ಬಂದಿದ್ದ ಐನಾತಿಗಳು ನಂತರ ತಮ್ಮ ಅಸಲಿ ವರಸೆ ಶುರುವಿಟ್ಟುಕೊಂಡಿದ್ದರು. ಮನೆಯಲ್ಲಿಯೇ ಡ್ರಗ್ ಶೇಖರಿಸಿಕೊಟ್ಟು ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು.
ಡ್ರಗ್ ಮಾರಾಟ ಮಾಡಲು ಹಾಗೂ ಶೇಖರಿಸಿಡಲು ಆರೋಪಿಗಳು ಸಖತ್ ಪ್ಲಾನ್ ಮಾಡಿಕೊಂಡಿದ್ದರು. ರೆಡಿಮೇಡ್ ಬಟ್ಟೆಗಳು, ಅದರಲ್ಲೂ ಮಹಿಳೆಯರ ಚೂಡಿದಾರದಂತಹ ಬಟ್ಟೆಗಳಲ್ಲಿ, ಹೊಸ ಶರ್ಟ್ , ಪ್ಯಾಂಟ್ಗಳ ಪ್ಯಾಕ್ ಮಾಡುವಾಗ ನಡುವೆ ಬಳಸುವ ಕಾರ್ಡ್ ಬೋರ್ಡ್ ಮಧ್ಯೆ ಮಾದಕ ವಸ್ತು ತುಂಬಿ ಇಟ್ಟು ಮಾರಾಟ ಮಾಡುತ್ತಿದ್ದರು.