ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಣಾಪೂರ ಕೆರೆ ಸಮೀಪದ ತುಂಗಭದ್ರಾ ಎಡದಂಡೆ ಕಾಲುವೆ ಪಕ್ಕದಲ್ಲಿ ವಿದೇಶಿ ಮತ್ತು ದೇಶಿ ಪ್ರವಾಸಿಗರ ಮೇಲೆ ಅತ್ಯಾಚಾರ ಮತ್ತು ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇನ್ನೋರ್ವನಿಗಾಗಿ ಹುಡುಕಾಟ ನಡೆಸಿದ್ದಾರೆ.
ಆರೋಪಿಗಳನ್ನು ಗಂಗಾವತಿಯ ಸಾಯಿನಗರದ ಮಲ್ಲೇಶ, ಚೇತನಸಾಯಿ ಎಂದು ಗುರುತಿಸಲಾಗಿದೆ.
ಪ್ರಕರಣ ಸಂಬಂಧ ವಿಶೇಷ ತಂಡವನ್ನು ರಚಿಸಿದ ಗಂಗಾವತಿ ಪೊಲೀಸರು, ಒಂದೇ ದಿನದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಮೂವರ ಪೈಕಿ ಓರ್ವ ನಾಪತ್ತೆಯಾಗಿದ್ದು, ಹುಡುಕಾಟ ಮುಂದುವರಿಸಿದ್ದಾರೆ.
ಘಟನೆ ಏನು?
ಆನೆಗೊಂದಿಯ ಹೋಂ ಸ್ಟೇನಲ್ಲಿ ಉಳಿದುಕೊಂಡಿದ್ದ 5 ಜನ ಪ್ರವಾಸಿಗರು ಮಾ.6 ರಂದು ರಾತ್ರಿ ಊಟ ಮುಗಿಸಿಕೊಂಡು ಸುತ್ತಾಡಲು ತೆರಳಿದ್ದರು. ಸಣಾಪೂರ ಕೆರೆಯ ಸಮೀಪದ ತುಂಗಭದ್ರಾ ಎಡದಂಡೆ ಕಾಲುವೆಯ ಬಳಿ ಹೋಗಿ ಸಂಗೀತ ಆಲಿಸುತ್ತಾ ಕುಳಿತಾಗ ಮೂವರು ದುಷ್ಕರ್ಮಿಗಳು ಹಣ ಕಳ್ಳತನ ಮಾಡುವ ಉದ್ದೇಶದಿಂದ ಬಂದು ಗಲಾಟೆ ನಡೆಸಿದ್ದರು.ಮದ್ಯದ ಅಮಲಿನಲ್ಲಿದ್ದ ದುಷ್ಕರ್ಮಿಗಳು, ಮೂವರು ಪುರುಷರ ಮೇಲೆ ಹಲ್ಲೆಯನ್ನು ನಡೆಸಿ ಕೆರೆಗೆ ತಳ್ಳಿದ್ದರು. ಇನ್ನೂ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಕೆರೆಗೆ ಬಿದ್ದ ಮೂವರ ಪೈಕಿ ಇಬ್ಬರು ದಡಕ್ಕೆ ಸೇರಿದ್ದು, ಇನ್ನೋರ್ವನ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ದಡಕ್ಕೆ ಬರಲು ಸಾಧ್ಯವಾಗದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಅತ್ಯಾಚಾರಕ್ಕೊಳಗಾದವರನ್ನು ಓರ್ವ ಇಸ್ರೇಲ್ ಮಹಿಳೆ ಹಾಗೂ ದೇಶಿ ಮಹಿಳೆ ಎಂದು ತಿಳಿಯಲಾಗಿದ್ದು, ಕೊಲೆಯಾಗಿರುವ ಪ್ರವಾಸಿಯನ್ನು ಓರಿಸ್ಸಾ ಮೂಲದ ಬೀಬಾಷಾ ಎಂದು ಗುರುತಿಸಲಾಗಿದೆ. ಇನ್ನೂ ಇದೇ ವೇಳೆ ಜರ್ಮನ್ ದೇಶದ ಡೇನೈಲ್ ಹಾಗೂ ಮಹಾರಾಷ್ಟ್ರ ಮೂಲದ ಪಂಕಜ್ ಎನ್ನುವವರು ಗಾಯಗೊಂಡಿದ್ದರು.