ಹೊಸದಿಗಂತ ವರದಿ,ಯಾದಗಿರಿ:
ದೂರುದಾರರಿಂದ ಹಣ ಸ್ವೀಕರಿಸಿದ ಆರೋಪಕ್ಕೆ ಸಂಬಂಧಿಸಿದಂತೆಯೇ ಇಬ್ಬರು ಪೊಲೀಸ್ ರನ್ನು ಎಸ್ ಪಿ ಪ್ರಥ್ವಿಕ್ ಶಂಕರ್ ಅವರು ಸೇವೆಯಿಂದ ಅಮಾನತುಗೊಳಿಸಿದ ಪ್ರಕರಣ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿನಡೆದಿದೆ.
ಪೊಲೀಸ್ ಸಿಬ್ಬಂದಿಗಳಾದ ವಿಶ್ವನಾಥರಡ್ಡಿ ಮತ್ತು ಗೋಪಾಲರೆಡ್ಡಿ ಎಂಬುವವರೇ ಅಮಾನತುಗೊಂಡಿದ್ದಾರೆ.
ಘಟನೆ ವಿವರ : ಕಳೆದ ಜೂ.24 ರಂದು ಠಾಣಾ ವ್ಯಾಪ್ತಿಯ ಮಿನಾಸಪುರ ಗ್ರಾಮದ ವೆಂಕಟರಡ್ಡಿ ಮತ್ತು ಅವರ ಮಗ ಹಣಮಂತರಡ್ಡಿ ಎಂಬುವವರ ಮೇಲೆ ಯಾದಯ್ಯ, ಮಲ್ಲಯ್ಯ ಮತ್ತು ಗೋಪಿ ಎಂಬುವವರು ಸೇರಿದಂತೆಯೇ ಐವರು ಮಾರಣಾಂತಿಕ ಹೊಡೆದು ಕೈ,ಕಾಲು ಮುರಿದಿದ್ದಾರೆ ಮತ್ತು ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆಂದು ಅನುಸೂಯಾ ವೆಂಟಕರಡ್ಡಿ ಎಂಬುವವರು ದೂರು ನೀಡಿದ್ದರು. ಆರೋಪಿಗಳನ್ನು ಬಂಧಿಸುವ ಕುರಿತು ವಿಚಾರಿಸಿದಾಗ ಅವರನ್ನು ಬಂಧಿಸಬೇಕಾದರೇ ಒಂದು ಲಕ್ಷ ರೂ. ನೀಡಬೇಕೆಂಬ ಬೇಡಿಕೆ ಈ ಇಬ್ಬರು ಪೊಲೀಸರು ಇಟ್ಟಿದ್ದರು . ಆಗ ವಿಶ್ವನಾಥರಡ್ಡಿ ಎಂಬುವವರ ಮೊಬೈಲ್ ಗೆ 10 ಸಾವಿರ ರೂ. ಹಾಗೂ ರಾಜೇಂದ್ರಬಾಬು ಎಂಬುವವರ ನಂ.ಗೆ ಹತ್ತು ಸಾವಿರ ರೂ. ಪೊನ್ ಮಾಡಿದ್ದರ ಬಗ್ಗೆ ಎಸ್ ಪಿ ಅವರಿಗೆ ಸಲ್ಲಿಸಿದ್ದ ದೂರಿನಲ್ಲಿ ಅನುಸೂಯ ಎಂಬುವವರು ವಿವರಿಸಿದ್ದರು.
ಈ ದೂರಿನ್ವಯ ತನಿಖೆಗೆ ಆದೇಶಿಸಿದಾಗ ಇದನ್ನು ತನಿಖೆ ಮಾಡಿದ ಡಿವೈಎಸ್ ಪಿ ನಾಗರಾಜ ಅವರು ನೀಡಿದ ವರದಿ ಆಧಾರದ ಮೇಲೆ ಈ ಇಬ್ಬರನ್ನು ಎಸ್ ಪಿ ಅವರು ಸೇವೆಯಿಂದ ಅಮಾನತುಗೊಳಿಸಿದ್ದಾರೆ.