ದಿಗಂತ ವರದಿ ಕಾರವಾರ:
ಇಲ್ಲಿನ ಕೋಡಿಭಾಗ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾಳಿ ನದಿಗೆ ನಿರ್ಮಾಣ ಮಾಡಲಾಗಿರುವ ಹೊಸ ಸೇತುವೆ ಮೇಲೆ ಭಾರೀ ವಾಹನಗಳಿಗೂ ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ಸಂಬಂಧಿಸಿದಂತೆ ಸುರಕ್ಷತಾ ಪ್ರಮಾಣ ಪತ್ರ ನೀಡಿದ್ದು ಬುಧವಾರ ರಾತ್ರಿಯಿಂದ ಭಾರೀ ವಾಹನಗಳ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿದೆ.
ಕಾಳಿ ನದಿಗೆ ಕೋಡಿಭಾಗ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಿರ್ಮಾಣ ಮಾಡಲಾಗಿದ್ದ ಹಳೆಯ ಸೇತುವೆ ಬುಧವಾರ ಬೆಳಗ್ಗಿನ ಜಾವ ಕುಸಿದು ಬಿದ್ದ ಕಾರಣ ಏಕ ಮುಖ ಸಂಚಾರ ಇದ್ದ ಹೊಸ ಸೇತುವೆ ಮೇಲೆ ಎರಡು ಬದಿಯಲ್ಲಿ ವಾಹನಗಳ ಸಂಚಾರದ ಕುರಿತು ಪ್ರಶ್ನೆಗಳು ಉದ್ಬವಿಸಿದ್ದವು ಈ ಭಾಗ ಗೋವಾ ಮತ್ತು ಕರ್ನಾಟಕ ರಾಜ್ಯಗಳ ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗ ಆಗಿರುವುದರಿಂದ ಲಘು ವಾಹನಗಳ ದ್ವಿಮುಖ ಸಂಚಾರಕ್ಕೆ ಹೊಸ ಸೇತುವೆ ಮೇಲೆ ಅವಕಾಶ ಮಾಡಿ ಕೊಡಲಾಗಿತ್ತು ಅಲ್ಲದೇ ಭಾರೀ ವಾಹನಗಳ ದ್ವಿಮುಖ ಸಂಚಾರಕ್ಕೆ ಸೇತುವೆ ಸುರಕ್ಷಿತವೇ ಎಂದು ಸುರಕ್ಷತಾ ಪ್ರಮಾಣ ಪತ್ರ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ಧರು.
ಇದೀಗ ಎ.ಎಸ್. ಸಿಸ್ಟಮ್ ಇಂಡಿಯಾ ಕಂಪನಿಯ ತಂತ್ರಜ್ಞರು ಈ ಕುರಿತು ಪರಿಶೀಲನೆ ನಡೆಸಿ ದ್ವಿಮುಖ ಸಂಚಾರಕ್ಕೆ ಹೊಸ ಸೇತುವೆ ಸುರಕ್ಷಿತ ಎಂದು ಪ್ರಮಾಣಿಕರಿಸಿದ್ದು ಎಲ್ಲಾ ವಾಹನಗಳ ಓಡಾಟಕ್ಕೆ ಹೊಸ ಸೇತುವೆ ಮೇಲೆ ಅವಕಾಶ ಮಾಡಿ ಕೊಡಲಾಗಿದೆ.