ಹೊಸದಿಗಂತ ವರದಿ,ಪುತ್ತೂರು:
ಮಹಿಳೆಯರಿಬ್ಬರಿಗೆ ವ್ಯಕ್ತಿಯೋರ್ವ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಪುತ್ತೂರಿನ ಬಡಗನ್ನೂರು ಗ್ರಾಮದ ನೇರೋಳ್ತಡ್ಕ ಮೂಲೆತ್ತಂಡ ಎಂಬಲ್ಲಿ ಮಂಗಳವಾರ ಅಪರಾಹ್ನ ನಡೆದಿದ್ದು, ಗಂಭೀರ ಗಾಯಗೊಂಡ ಮಹಿಳೆಯರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲೆತ್ತಂಡ ಎಂಬಲ್ಲಿನ ಮನೆಯ ಯಜಮಾನಿ ಸುರೇಖಾ ಹಾಗೂ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಗೋಳಿತ್ತೊಟ್ಟು ನಿವಾಸಿ ಗಿರಿಜಾ ಹಲ್ಲೆಗೊಳಗಾದವರು. ಸುರೇಖಾ ಅವರ ಸಂಬಂಧಿ ಸುಳ್ಯ ಮೂಲದ ವ್ಯಕ್ತಿ ಈ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಆರೋಪಿಯು ಸಮೀಪದ ಗುಡ್ಡೆಯಲ್ಲಿ ಕೆಲಸ ಮಾಡುತ್ತಿದ್ದ ಮನೆಯ ಕೆಲಸದಾಕೆ ಗಿರಿಜಾ ಅವರಿಗೆ ಆರಂಭದಲ್ಲಿ ಹಲ್ಲೆ ನಡೆಸಿದ್ದು, ಬಳಿಕ ಮನೆಯೊಡತಿ ಸುರೇಖಾ ಅವರನ್ನು ಗಿರಿಜಾ ಅವರಿಗೆ ಏನೋ ಅಪಾಯವಾಗಿದೆ ಎಂದು ಗುಡ್ಡೆಗೆ ಕರೆದೊಯ್ದಿದ್ದಾನೆ. ಬಳಿಕ ಅವರಿಗೂ ಆಯುಧದಿಂದ ಹಲ್ಲೆ ನಡೆಸಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಗಂಭೀರ ಗಾಯಗೊಂಡ ಮಹಿಳೆಯರನ್ನು ಈಶ್ವರಮಂಗಲದ ಹಿಂದೂ ಜಾಗರಣ ವೇದಿಕೆ ಆಂಬ್ಯುಲೆನ್ಸ್ ಮೂಲಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗಿದ್ದು, ಇಬ್ಬರಿಗೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸುಲೇಖ ಅವರು ಮಗನ ಜೊತೆ ವಾಸವಿದ್ದು, ಹೊಸ ಮನೆ ನಿರ್ಮಾಣದ ಕೆಲಸ ನಡೆಯುತ್ತಿದೆ. ಗಿರಿಜಾ ಅವರು ಸುರೇಖಾ ಅವರ ಮನೆಯಲ್ಲಿದ್ದುಕೊಂಡು ಕೆಲಸ ಮಾಡುತ್ತಿದ್ದರು. ಸುರೇಖಾ ಅವರ ಸಂಬಂಧಿಯೂ ಆಗಿರುವ ಹಲ್ಲೆ ಮಾಡಿದ ಆರೋಪಿ ಕೆಲವು ಸಮಯಗಳಿಂದ ಅವರ ಜತೆಗೇ ಇದ್ದ ಎನ್ನಲಾಗಿದೆ.
ಸ್ಥಳೀಯ ನಿವಾಸಿಗಳು ಮಹಿಳೆಯರು ಗುಡ್ಡದಲ್ಲಿ ಬಿದ್ದಿರುವುದನ್ನು ಸುರೇಖಾ ಅವರ ಮಗನಿಗೆ ತಿಳಿಸಿದ್ದು, ಆತ ಆಗಮಿಸಿ ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಿದ್ದಾಗಿ ತಿಳಿದು ಬಂದಿದೆ. ಈಶ್ವರಮಂಗಲ ಹೊರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಹಲ್ಲೆಗೆ ಕಾರಣ ತನಿಖೆ ನಂತರವಷ್ಟೇ ತಿಳಿಯಬೇಕಿದೆ..