ಹೊಸದಿಗಂತ ವರದಿ, ತುಮಕೂರು :
ನಗರದ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಲಾರೋಸ್ ಬಯೋ ರಾಸಾಯನಿಕ ಕಾರ್ಖಾನೆಯೊಂದ ಸಂಪು ಸ್ವಚ್ಛಗೊಳಿಸಲು ಹೋದ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು ಮತ್ತಿಬ್ಬರು ಅಸ್ವಸ್ಥರಾಗಿದ್ದಾರೆ.
ಮಧುಗಿರಿ ತಾಲೂಕಿನ ಮಾಗೋಡು ನಿವಾಸಿ ಪ್ರತಾಪ್ (23) , ಶಿರಾ ತಾಲೂಕು ತರೂರು ಗ್ರಾಮದ ವೆಂಕಟೇಶ್(32) ಮೃತ ದುರ್ದೈವಿಗಳು.
ಶಿರಾ ತಾಲೂಕಿನ ತರೂರು ಗ್ರಾಮದ ಮಂಜಣ್ಣ(42) ಹಾಗೂ ಯುವರಾಜ್ (32) ಅಸ್ವಸ್ಥರಾಗಿದ್ದು ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಧುಗಿರಿ ತಾಲೂಕಿನ ಮಾಗೋಡು ನಿವಾಸಿಯಾದ ಪ್ರತಾಪ್ ಕಾರ್ಖಾನೆಯ ಸೆಕ್ಯೂರಿಟಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.
1 ಲಕ್ಷ ಲೀಟರ್ ಸಾಮರ್ಥ್ಯದ ಸಂಪನ್ನು ಮೊದಲು ಮಂಜಣ್ಣ ಹಾಗೂ ಯುವರಾಜ್ ಎಂಬುವವರು ಸ್ವಚ್ಛಗೊಳಿಸಲು ಹೋಗಿದ್ದು ಅವರಿಗೆ ಉಸಿರಾಟದ ತೊಂದರೆ ಉಂಟಾಗಿದೆ. ಅದನ್ನು ನೋಡಿದ ಪ್ರತಾಪ್ ವೆಂಕಟೇಶ್ ಮಂಜಣ್ಣ ಹಾಗೂ ಯುವರಾಜ್ ಅವರನ್ನು ಉಳಿಸಲು ಹೋಗಿ ಸಾವನ್ನಪ್ಪಿದ್ದಾರೆ.
ಬೆಂಗಳೂರು ಮೂಲದ ಈ ಕಾರ್ಖಾನೆಯು ಸುಮಾರು ನಾಲ್ಕು ವರ್ಷಗಳಿಂದ ನಡೆಯುತ್ತಿದ್ದು ಕಾರ್ಖಾನೆಯಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಆಹಾರ ಉತ್ಪಾದನೆ ಮಾಡಲಾಗುತ್ತದೆ. ಸುಮಾರು 200 ಜನ ಕಾರ್ಮಿಕರಿದ್ದು ಪ್ರತಿದಿನ ನಾಲ್ಕು ಪಾಳಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಮೃತಪಟ್ಟಿರುವ ಪ್ರತಾಪ್ ಕಾಂಟ್ರಾಕ್ಟ್ ಬೇಸಿಸ್ ( ಹೊರಗುತ್ತಿಗೆ ಆಧಾರ) ಕಾರ್ಮಿಕರಾಗಿದ್ದರೆ, ಉಳಿದ ಮೂರು ಜನ ಸಬ್ ಕಾಂಟ್ರಾಕ್ಟರ್ ಕಡೆಯಿಂದ ಬಂದ ಕೆಲಸಗಾರರಾಗಿದ್ದರು.
ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.