ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ನೇಹಿತನ ಮದುವೆ ಕಾರ್ಯಕ್ರಮಕ್ಕಾಗಿ ಬೆಂಗಳೂರಿನಿಂದ ಬಂದ ಯುವಕರಿಬ್ಬರು ಸಮುದ್ರದಲ್ಲಿ ಈಜಲು ತೆರಳಿದ ವೇಳೆ ಸಮುದ್ರದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಬೀಜಾಡಿ ಬೀಚ್‌ನಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.
ಬೆಂಗಳೂರು ದಾಸರಹಳ್ಳಿ ಮೂಲದ ಸಂತೋಷ್ (೨೫) ಮತ್ತು ಕುಂದಾಪುರ ಮೂಲದ ಅಜಯ್ (೨೫) ಮೃತಪಟ್ಟ ದುರ್ದೈವಿಗಳು.
ಸ್ನೇಹಿತನ ಮದುವೆ ಕಾರ್ಯಕ್ರಮಕ್ಕೆಂದು ನಾಲ್ವರು ಸ್ನೇಹಿತರು ಬೆಂಗಳೂರಿನಿಂದ ಕುಂದಾಪುರಕ್ಕೆ ಬಂದಿದ್ದು ಬೀಜಾಡಿ ಬೀಚ್ ಪಕ್ಕದ ರೆಸಾರ್ಟ್‌ವೊಂದರಲ್ಲಿ ಉಳಿದುಕೊಂಡಿದ್ದರು. ಇಂದು ಬೆಳಿಗ್ಗೆ ಮೂವರು ಸಮುದ್ರದಲ್ಲಿ ಈಜಲು ತೆರಳಿದ ವೇಳೆ ಅವರ ಪೈಕಿ ಇಬ್ಬರು ಸಮುದ್ರ ಪಾಲಾಗಿದ್ದಾರೆ.
ಬೆಂಗಳೂರು ಮೂಲದ ಮೋಕ್ಷಿತ್ ಮುಂದೆ ಹೋಗಬೇಡಿ ಎಂದು ಗೋಗರೆದರೂ ಕೇಳದೆ ನೀರಿನಲ್ಲಿ ಮುಂದೆ ಸಾಗಿರುವ ಸಂತೋಷ್ ಹಾಗೂ ಅಜಯ್ ನೀರಿನ ಸೆಳೆತಕ್ಕೆ ಸಿಲುಕಿದ್ದರು. ಯುವಕರನ್ನು ಮೋಕ್ಷಿತ್ ರಕ್ಷಿಸಲು ಮುಂದಾಗಿದ್ದು, ಸಂತೋಷ್ ಅವರನ್ನು ದಡಕ್ಕೆ ತಂದು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.
ಕುಂದಾಪುರ ಮೂಲದ ಅಜಯ್ ನೀರಿನ ಸೆಳೆತಕ್ಕೆ ಸಿಲುಕಿ ನೀರುಪಾಲಾಗಿದ್ದು, ಸ್ಥಳೀಯರು, ಅಗ್ನಿಶಾಮಕ ದಳ, ಮುಳುಗು ತಜ್ಞರ ತಂಡ ಹಾಗೂ ಕರಾವಳಿ ಕಾವಲು ಪೊಲೀಸ್ ಶೋಧ ನಡೆಸಿ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ.
ಇತ್ತೀಚೆಗೆ ತಿಪಟೂರು ಮೂಲದ ಯುವಕನೋರ್ವ ಸ್ನೇಹಿತನ ಮದುವೆಗೆ ಬಂದ ವೇಳೆ ಬೀಜಾಡಿ ಸಮುದ್ರದಲ್ಲಿ ಈಜಲು ಹೋಗಿ ಸಾವನ್ನಪ್ಪಿದ ಘಟನೆ ನೆನಪು ಮಾಸುವ ಮುನ್ನವೇ ಇದೀಗ ಇನ್ನೊಂದು ಘಟನೆ ನಡೆದಿರುವುದು ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ.