ಹೊಸದಿಗಂತ, ಮಂಗಳೂರು:
ದೇಶದಲ್ಲಿಯೇ ಭರ್ಜರಿ ಸುದ್ದಿ ಮಾಡಿದ್ದ ಉಡುಪಿ ನಡುರಸ್ತೆಯ ಗ್ಯಾಂಗ್‌ವಾರ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಕಾಪು ಕೊಂಬಗುಡ್ಡೆ ಮೂಲದ ಆಶಿಕ್, ತೋನ್ಸೆ ಹೂಡೆಯ ರಾಕೀಬ್ ಹಾಗೂ ಸಕ್ಲೈನ್, ಬ್ರಹ್ಮಾವರದ ಶರೀಫ್, ಕಾಪು ಮೂಲದ ಮಜೀದ್, ಅಲಾಝ್ ಎಂಬವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ದೂರು ಪ್ರತಿದೂರು ಹಾಗೂ ವಿಡಿಯೋ ಆಧರಿಸಿ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ.
ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಕುಂಜಿಬೆಟ್ಟು ಎಂಬಲ್ಲಿ ಮೇ 18ರ ರಾತ್ರಿ 19ರ ಮುಂಜಾನೆ ನಡುವೆ ಈ ಗ್ಯಾಂಗ್ ವಾರ್ ನಡೆದಿತ್ತು. ಈ ಬಗೆಗಿನ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಘಟನೆ ವ್ಯಾಪಕ ಚರ್ಚೆಗೂ ಕಾರಣವಾಗಿತ್ತು.