ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನಕ್ಕೆ ಸಜ್ಜಾಗುತ್ತಿದೆ ಪೊಡವಿಗೊಡೆಯನ ನಾಡು ಉಡುಪಿ!

ಹೊಸದಿಗಂತ‌ ಡಿಜಿಟಲ್, ಮಂಗಳೂರು:

ಪೊಡವಿಗೊಡೆಯನ‌ ನಾಡು ಉಡುಪಿಯಲ್ಲಿ‌ ದೀಪಾವಳಿ ಇನ್ನಷ್ಟು ವಿಶಿಷ್ಟವಾಗಲಿದೆ.
ಈ ಬಾರಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ಜ್ಞಾನ ದೀಪೋತ್ಸವ ನಡೆಯಲಿದ್ದು, ಅದಕ್ಕಾಗಿ ಭರದ ಸಿದ್ಧತೆ ಆರಂಭವಾಗಿದೆ.

ಪರ್ಯಾಯ ಶ್ರೀ ಪುತ್ತಿಗೆ ಮಠ, ಬೆಂಗಳೂರಿನ ಭಾರತೀಯ ವಿದ್ವತ್ ಪರಿಷತ್ತು, ಮತ್ತು ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಸಹಯೋಗದೊಂದಿಗೆ ಅ.24ರಿಂದ 26ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ಐತಿಹಾಸಿಕ 51ನೇ ಅಖಿಲ ಭಾರತ ಪ್ರಾಚ್ಯವಿದ್ಯಾಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

ಈ ಬಗ್ಗೆ ಉಡುಪಿಯಲ್ಲಿ ವಿಸ್ತೃತ ಮಾಹಿತಿ ನೀಡಿದ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ, ಈ ಸಮ್ಮೇಳನದಲ್ಲಿ‌ ದೇಶ ವಿದೇಶಗಳ ಎರಡು ಸಾವಿರಕ್ಕೂ ಅಧಿಕ ಪಂಡಿತರು ಭಾಗವಹಿಸಿ ವಿದ್ವತ್ಪೂರ್ಣ ಪ್ರಬಂಧಗಳನ್ನು ಮಂಡಿಸಲಿದ್ದಾರೆ, ದೇಶದ ವಿವಿಧ ವಿಶ್ವವಿದ್ಯಾಲಯಗಳ 18ಕ್ಕೂ ಹೆಚ್ಚಿನ ಕುಲ ಪತಿಗಳು ಕಾರ್ಯ ಕ್ರಮದಲ್ಲಿ ಭಾಗ ವಹಿಸುತ್ತಿದ್ದಾರೆ ಎಂದರು.

ರಾಷ್ಟ್ರಪತಿ, ಯೋಗಿ ಭಾಗಿ ನಿರೀಕ್ಷೆ

ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದರು, ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶ ಶ್ರೀವಿದ್ಯಾಪ್ರಸನ್ನತೀರ್ಥ ಶ್ರೀಪಾದರು, ಹರಿದ್ವಾರದ ಪತಂಜಲಿ ಯೋಗಪೀಠ ಟ್ರಸ್ಟ್ ನ ಸ್ವಾಮಿ ಬಾಬಾ ರಾಮದೇವ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರಪತಿಗಳಿಗೆ ಆಹ್ವಾನ ನೀಡಲಾಗಿದ್ದು, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಪಾಲರು, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಪುತ್ತಿಗೆ ಶ್ರೀ ವಿವರಿಸಿದರು.

ಆಲ್ ಇಂಡಿಯಾ ಓರಿಯಂಟಲ್ ಕಾನ್ಫರೆನ್ಸ್ ಕಾರ್ಯದರ್ಶಿ ಡಾ. ಶಿವಾನಿ ವಿ. ಮಾತನಾಡಿ, 1919ರಲ್ಲಿ ಹಿಮಾಚಲ ಪ್ರದೇಶದ ಶಿವ್ಲಾ ನಗರದಲ್ಲಿ ಸಂಸ್ಥೆ ಅಸ್ತಿತ್ವಕ್ಕೆ ಬಂದಿದ್ದು, ಭಾರತೀಯ ಭಾಷೆಗಳು ಹಾಗೂ ಸಾಹಿತ್ಯದ ಅಭಿವೃದ್ಧಿಗೆ ಅಪಾರ ಸೇವೆ ಸಲ್ಲಿಸುತ್ತಿದೆ. ಪ್ರತಿ 2 ವರ್ಷಕ್ಕೊಮ್ಮೆ ದೇಶದ ವಿವಿಧ ಭಾಗಗಳಲ್ಲಿ ಈಗಾಗಲೇ 50 ಸಮಾವೇಶಗಳನ್ನು ಯಶಸ್ವಿಯಾಗಿ ನಡೆಸಿದೆ ಎಂದರು.

ಏಕಕಾಲದಲ್ಲಿ ವಿಚಾರ ಸಂಕಿರಣ

ಅಷ್ಟಮಠಗಳ ಆವರಣ, ಸಂಸ್ಕೃತ ಕಾಲೇಜು ಮೊದಲಾದ ಸ್ಥಳಗಳಲ್ಲಿ ಏಕಕಾಲದಲ್ಲಿ ಶಿಕ್ಷಣ, ಬಾಲಸಾಹಿತ್ಯ, ಕನ್ನಡ, ಸಂಸ್ಕೃತ, ಪಾಲಿ, ಉರ್ದು, ಯೋಗ, ಆಯುರ್ವೇದ ಮೊದಲಾದ ಒಟ್ಟು 23 ವಿಷಯಗಳಲ್ಲಿ ಪ್ರತ್ಯೇಕ ವಿಚಾರಸಂಕಿರಣ ನಡೆಯಲಿದೆ. ಭಗವದ್ಗೀತೆ ವಿಷಯದಲ್ಲಿ ಹಿರಿಯ ವಿದ್ವಾಂಸರಿಂದ ಗೋಷ್ಠಿಗಳು ಜರುಗಲಿವೆ. ತರುಣರ ಕವಿಗೋಷ್ಠಿ, ಯುವ ವಿದ್ವಾಂಸರು ಮತ್ತು ವಿದುಷಿಯರಿಂದ ವಾಕ್ಯಾರ್ಥ ಗೋಷ್ಠಿಗಳು, ಹಿರಿಯ ಪ್ರಸಿದ್ಧ ವಿದ್ವಾಂಸರಿಂದ ಶಾಸ್ತ್ರಾರ್ಥ ಸಭೆಗಳು ನಡೆಯಲಿವೆ. ಪತಂಜಲಿ ಬಾಬಾ ರಾಮದೇವ ಮತ್ತು ಆಚಾರ್ಯ ಬಾಲಕೃಷ್ಣ ನೇತತ್ವದಲ್ಲಿ ಮೂರು ದಿನಗಳ ಕಾಲ ಯೋಗ-ಧ್ಯಾನಾದಿ ತರಗತಿ ಆಯೋಜನೆಗೊಂಡಿವೆ.

ದಿಲ್ಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಶ್ರೀನಿವಾಸ ವರಖೇಡಿ, ಕರ್ನಾಟಕ ಸಂಸ್ಕೃತ ವಿವಿ ಡೀನ್ ಡಾ. ವೀರನಾರಾಯಣ ಪಾಂಡುರಂಗಿ ಮಾತನಾಡಿ ಸಮ್ಮೇಳನದ ಇನ್ನಷ್ಟು ವಿವರ ನೀಡಿದರು.

ದಿವಾನ್ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಎಐಒಸಿ ಕಾರ್ಯದರ್ಶಿ ಡಾ.ಶ್ರುತಿ ರಾವ್, ವಿದ್ವಾಂಸರಾದ ಭಾಸ್ಕರ ಜೋಶಿ ಈ ಸಂದರ್ಭ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!