ಉಡುಪಿ ವಿಡಿಯೋ ವಿವಾದ: ಎಸ್‍ಐಟಿ ತನಿಖೆಗೆ ರಾಜ್ಯಪಾಲರಿಗೆ ಮನವಿ ಮಾಡಿದ ಉಡುಪಿ, ದ.ಕ. ಶಾಸಕರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು: ಉಡುಪಿಯಲ್ಲಿ ನೇತ್ರಜ್ಯೋತಿ ಅರೆ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಫೋನ್ ಮೂಲಕ ವಿಡಿಯೋ ಚಿತ್ರೀಕರಣ ಮಾಡಿದ ಘಟನೆ ಕುರಿತು ಎಸ್‍ಐಟಿ ತನಿಖೆ ನಡೆಸಲು ರಾಜ್ಯ ಸರಕಾರಕ್ಕೆ ಆದೇಶ ನೀಡುವಂತೆ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.

ಬಳಿಕ ರಾಜಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸರಕಾರವು ದುರದೃಷ್ಟಕ್ಕೆ ಡಿಎಸ್‍ಪಿ ಮಟ್ಟದ ಅಧಿಕಾರಿಯಿಂದ ತನಿಖೆ ನಡೆಸುತ್ತಿದೆ. ಸರಕಾರದ ಒತ್ತಡ ಇದ್ದರೆ ಡಿಎಸ್‍ಪಿ ಮಟ್ಟದ ಅಧಿಕಾರಿಯಿಂದ ಸಮರ್ಪಕ ತನಿಖೆ ಅಸಾಧ್ಯ. ಆದ್ದರಿಂದ ಎಸ್‍ಐಟಿ ತನಿಖೆಗೆ ಆಗ್ರಹಿಸಿದ್ದೇವೆ ಎಂದು ತಿಳಿಸಿದರು.

ಗೃಹ ಸಚಿವರು ಇದೊಂದು ತಮಾಷೆಯ ವಿಷಯ ಎಂಬಂತೆ ಮಾತನಾಡಿದ್ದಾರೆ. ಮುಖ್ಯಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ; ಸರಕಾರವೂ ಮೀನಮೇಷ ಎಣಿಸುತ್ತಿದೆ ಎಂದ ಅವರು, ಇವತ್ತು ನಾವು ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ. ಎಸ್‍ಐಟಿ ತನಿಖೆಗೆ ಸೂಚಿಸಲು ಕೋರಿದ್ದೇವೆ ಎಂದರು.

ಹದಗೆಟ್ಟ ಕಾನೂನು- ಸುವ್ಯವಸ್ಥೆ, ಗೊಂದಲದ ವಾತಾವರಣ, ವಿಡಿಯೋ ಚಿತ್ರೀಕರಣ ಮಾಡಿದ ವಿದ್ಯಾರ್ಥಿನಿಯರಿಗೆ ಜಾಮೀನು ಕೊಟ್ಟಿದ್ದು, ಅವರಿಗೆ ಪಿಎಫ್‍ಐ ಸಂಪರ್ಕ ಇರುವ ಸಾಧ್ಯತೆ ಕುರಿತು ಗಮನ ಸೆಳೆಯಲಾಗಿದೆ. ಸಮಗ್ರ ತನಿಖೆಗೆ ಎಸ್‍ಐಟಿ ಸೂಚಿಸಲು ಕೋರಿದ್ದೇವೆ ಎಂದು ವಿವರಿಸಿದರು.

ರಾಜ್ಯಪಾಲರು ಸೂಕ್ತ ನಿರ್ದೇಶನ ನೀಡುವುದಾಗಿ ತಿಳಿಸಿದ್ದಾರೆ ಎಂದು ಅವರು ನುಡಿದರು. ಉಡುಪಿಯ ಗಂಭೀರ ಘಟನೆ ಕುರಿತು ಸರಕಾರವು ಗಂಭೀರವಾಗಿ ಪರಿಗಣಿಸಿಲ್ಲ. ಗೃಹ ಸಚಿವರು ಮಕ್ಕಳಾಟಿಕೆ ಎಂಬ ಹೇಳಿಕೆ ಕೊಟ್ಟಿದ್ದಾರೆ ಎಂದು ಶಾಸಕ ಯಶಪಾಲ್ ಸುವರ್ಣ ಅವರು ಆಕ್ಷೇಪಿಸಿದರು.

ಶಾಸಕರಾದ ಯಶಪಾಲ್ ಸುವರ್ಣ, ಗುರುರಾಜ್ ಗಂಟಿಹೊಳೆ, ಕಿರಣ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಭಾಗೀರಥಿ ಮುರುಳ್ಯ, ರಾಜೇಶ್ ನಾಯಕ್ ಅವರು ಮನವಿ ಸಲ್ಲಿಸುವ ನಿಯೋಗದಲ್ಲಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!