ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಥಳೀಯ ಮಟ್ಟದಿಂದ ಜಾಗತಿಕ ಮಟ್ಟದಲ್ಲಿ ನೆಲೆನಿಲ್ಲುವ ಮಾಧ್ಯಮ ಪ್ರಯತ್ನಗಳು ವಿಶಿಷ್ಟ ಪ್ರಯೋಗಗಳಾಗಿ ಗಮನ ಸೆಳೆದಿವೆ. ಮಹಾತ್ಮಾ ಗಾಂಧಿ ಅವರ ಪತ್ರಿಕಾ ಪ್ರಯೋಗಗಳು ಇಂಥ ಸಾಧ್ಯತೆಗಳೊಂದಿಗೆ ಗುರುತಿಸಿಕೊಂಡಿವೆ. ಈ ಮಾದರಿಯ ಯಶಸ್ಸು ವಿಶ್ವಾಸಾರ್ಹತೆ ಮತ್ತು ನಿಖರತೆಯ ಅಡಿಪಾಯದೊಂದಿಗೆ ನಂಟು ಹೊಂದಿರಬೇಕು ಎಂದು ಸುದ್ದಿ ಸಮೂಹದ ಅಧ್ಯಕ್ಷ, ‘ಸುದ್ದಿ ಬಿಡುಗಡೆ’ ಸಂಪಾದಕ ಡಾ.ಯು.ಪಿ.ಶಿವಾನಂದ ಅಭಿಪ್ರಾಯಪಟ್ಟಿದ್ದಾರೆ.
ಉಜಿರೆಯ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಮತ್ತು ಪದವಿ ಅಧ್ಯಯನ ವಿಭಾಗಗಳು ಮೀಡಿಯಾ ಅಲ್ಯೂಮ್ನಿ ಅಸೋಸಿಯೇಷನ್ ಆಫ್ ಮಂಗಳಗಂಗೋತ್ರಿ (ಮಾಮ್) ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ‘ಸ್ಥಳೀಯ ಮಾಧ್ಯಮ: ಕಾರ್ಯನಿರ್ವಹಣೆ ಮತ್ತು ಸುಸ್ಥಿರತೆ’ ಕುರಿತ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ರಾಜ್ಯ, ರಾಷ್ಟ್ರಮಟ್ಟದ ಪತ್ರಿಕೆಗಳು ಸ್ಥಳೀಯ ಮಟ್ಟದ ವಿವರಗಳನ್ನು ಒಳಗೊಂಡಿರುತ್ತಿರಲಿಲ್ಲ. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸುದ್ದಿ ವಿವರಗಳು ಮಾತ್ರ ಕಾಣಿಸಿಕೊಳ್ಳುವ ಪ್ರವೃತ್ತಿ ಇತ್ತು. ಇಂಥ ಸಂದರ್ಭದಲ್ಲಿ ಜಿಲ್ಲೆ, ತಾಲೂಕು ಮಟ್ಟದ ಪತ್ರಿಕೆಗಳು ಹುಟ್ಟಿಕೊಂಡವು ಎಂದು ಅವರು ವಿವರಿಸಿದರು.
ಮೀಡಿಯಾ ಅಲ್ಯುಮ್ನಿ ಅಸೋಸಿಯೇಷನ್ ಆಫ್ ಮಂಗಳಗಂಗೋತ್ರಿ ಅಧ್ಯಕ್ಷ ನವೀನ್ ಅಮ್ಮೆಂಬಳ ಮಾತನಾಡಿ, ಸ್ಥಳೀಯ ಸ್ವರೂಪದ ಸುದ್ದಿಗಳು ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಬಲ್ಲವು. ಅಭಿವೃದ್ಧಿಯ ವಿನೂತನ ಮಾದರಿಯನ್ನು ಕಾಣಿಸಬಲ್ಲವು ಎಂದರು.
ಪ್ರಸ್ತುತ ಕ್ರಿಯಾಶೀಲ ಸ್ಥಳೀಯ ಪತ್ರಿಕೆಗಳಿಗೆ ಹೊಸ ಮಾಧ್ಯಮ ಲೋಕದಲ್ಲಿ ವ್ಯಾಪಕ ಅವಕಾಶಗಳು ಲಭ್ಯವಾಗುತ್ತಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂಕಾಲೇಜಿನ ಪ್ರಾಂಶುಪಾಲ ಡಾ.ಕುಮಾರ ಹೆಗ್ಡೆ ಬಿ.ಎ. ಮಾತನಾಡಿ, ಹೊಸ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುವ ವೃತ್ತಿನಿರತ ಪತ್ರಕರ್ತರು ವಿಸ್ತಾರವಾದ ಓದಿನ ನೆರವಿನೊಂದಿಗೆ ಭಿನ್ನವಾದ ಸೃಜನಶೀಲತೆ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೀಡಿಯಾ ಅಲ್ಯುಮ್ನಿ ಅಸೋಸಿಯೇಷನ್ ಆಫ್ ಮಂಗಳಗಂಗೋತ್ರಿ ಗೌರವಾಧ್ಯಕ್ಷ ವೇಣು ಶರ್ಮ, ಸಹಾಯಕ ಪ್ರಾಧ್ಯಾಪಕಿ, ಕಾರ್ಯಾಗಾರದ ಸಂಚಾಲಕಿ ಡಾ.ಗೀತಾ ಎ.ಜೆ. ಹಾಜರಿದ್ದರು. ವಿಭಾಗದ ಮುಖ್ಯಸ್ಥ ಡಾ.ಭಾಸ್ಕರ್ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ವೇತಾ ಇನಿಶಿಯೇಟಿವ್ ಮುಖ್ಯಸ್ಥ ಶರತ್ ಹೆಗ್ಡೆ ವಂದಿಸಿದರು. ಶಿವುಕುಮಾರ ನಿರೂಪಿಸಿದರು. ಬಳಿಕ ನಡೆದ ವಿವಿಧ ಗೋಷ್ಠಿಗಳಲ್ಲಿ ಮಾಮ್ ಪದಾಧಿಕಾರಿಗಳಾದ ವೇಣು ಶರ್ಮ, ಶರತ್ ಹೆಗ್ಡೆ, ವೇಣುವಿನೋದ್ ಕೆ.ಎಸ್. ಹಾಗೂ ಸುರೇಶ್ ಪುದುವೆಟ್ಟು ವಿಚಾರ ಮಂಡಿಸಿದರು.