ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಿಜ್ ಟ್ರಸ್ ಬ್ರಿಟಿಷ್ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ದೇಶದ ಕರೆನ್ಸಿ ಸ್ವಲ್ಪಮಟ್ಟಿಗೆ ಏರಿಕೆ ಕಂಡಿದೆ. ಗುರುವಾರ ಸಂಜೆ ರಾಜೀನಾಮೆ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಪೌಂಡ್ ಮೌಲ್ಯ ಶೇ.0.36ರಷ್ಟು ಏರಿಕೆ ಕಂಡಿರುವುದು ಗಮನಾರ್ಹ. ಕಳೆದ ತಿಂಗಳು ಲಿಜ್ ಟ್ರಸ್ ಸರ್ಕಾರ ಬಜೆಟ್ ಮಂಡಿಸಿತ್ತು ಅದರಲ್ಲಿ ಸಾಲದ ಹೊರೆ ಹೆಚ್ಚಾದಂತೆ ಪೌಂಡ್ ಮೌಲ್ಯ ಕಡಿಮೆಯಾಯಿತು.
ವಾಸ್ತವವಾಗಿ ಆರ್ಥಿಕತೆಯಲ್ಲಿ ಬದಲಾವಣೆಗಳನ್ನು ತರುವುದಾಗಿ ಹೇಳಿದ್ದ ಮಾಜಿ ಪ್ರಧಾನಿ ಲಿಜ್, ಆ ದಿಕ್ಕಿನಲ್ಲಿ ಸಾಗುವ ತಮ್ಮ ಪ್ರಯತ್ನದಲ್ಲಿ ಸಂಪೂರ್ಣವಾಗಿ ವಿಫಲರಾದರು. ಕೊಟ್ಟ ಭರವಸೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ರಾಜೀನಾಮೆ ನೀಡಿದರು. ಈ ಹಿಂದೆ ಪ್ರಧಾನಿ ಬೋರಿಸ್ ಜಾನ್ಸನ್ ಕೂಡ ಇದೇ ಕಾರಣಕ್ಕೆ ರಾಜೀನಾಮೆ ನೀಡಬೇಕಾಯಿತು. ಬ್ರೆಕ್ಸಿಟ್ ಬಳಿಕ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಜಾನ್ಸನ್ ದೇಶದಲ್ಲಿ ಆರ್ಥಿಕ ಸುಧಾರಣೆಗಳ ಕುರಿತು ಹಲವು ಭರವಸೆಗಳನ್ನು ನೀಡಿದ್ದರು. ಆದರೆ ಅದ್ಯಾವುದು ಕಾರ್ಯರೂಪಕ್ಕೆ ಬರದ ಕಾರಣ ಬೋರಿಸ್ ರಾಜೀನಾಮೆ ನೀಡಿದರು.
ಇದೀಗ ಬೋರಿಸ್ ಜಾನ್ಸನ್ ಬದಲಿಗೆ ಲಿಜ್ ಟ್ರಸ್ ಪ್ರಧಾನಿ ಹುದ್ದೆಯನ್ನು ವಹಿಸಿಕೊಂಡ 45 ದಿನಗಳ ನಂತರ ರಾಜೀನಾಮೆ ನೀಡಿದ್ದಾರೆ. ಈ ಘಟನೆ ಲಿಜ್ ಟ್ರಸ್ ಅವರನ್ನು ಬ್ರಿಟಿಷ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಅವಧಿಯ ಪ್ರಧಾನ ಮಂತ್ರಿಯನ್ನಾಗಿ ಮಾಡಿದೆ. ಇದುವರೆಗೆ ಈ ದಾಖಲೆ ಜಾರ್ಜ್ ಕ್ಯಾನಿಂಗ್ (119 ದಿನ) ಹೆಸರಿನಲ್ಲಿತ್ತು. ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಜಾರ್ಜ್ ಕ್ಯಾನಿಂಗ್ ಕ್ಷಯರೋಗದ ಉಲ್ಬಣದಿಂದಾಗಿ ನಿಧನರಾದರು.
ಸೆಪ್ಟೆಂಬರ್ 5 ರಂದು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಲಿಜ್ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಬ್ರಿಟನ್‌ನಲ್ಲಿ, ಟ್ರಸ್ ಬಂದರೆ ಪರಿಸ್ಥಿತಿ ಬದಲಾಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಟ್ರಸ್ಟ್ ನೇತೃತ್ವದ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ತೆಗೆದುಕೊಂಡ ಹಣಕಾಸಿನ ನಿರ್ಧಾರಗಳು ಗಂಭೀರ ವಿರೋಧಕ್ಕೆ ಕಾರಣವಾಯಿತು.