Friday, August 29, 2025

ರಷ್ಯಾ ಡ್ರೋನ್‌ ದಾಳಿಯಲ್ಲಿ ಉಕ್ರೇನ್‌ನ ಅತಿದೊಡ್ಡ ಯುದ್ಧನೌಕೆ ಉಡೀಸ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:


ಅತ್ತ ತಾನು ರಷ್ಯಾ-ಉಕ್ರೇನ್‌ ಯುದ್ಧ ನಿಲ್ಲಿಸುತ್ತೇನೆ ಎನ್ನುತ್ತಾ ಜಗತ್ತಿನ ತುಂಬೆಲ್ಲಾ ಡಂಗುರ ಹೊಡೆದು ಬಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಈ ದಿಸೆಯಲ್ಲಿ ವಿಫಲವಾಗಿದ್ದು, ಉಕ್ರೇನಿಯನ್ ನೌಕಾಪಡೆಯ ಸಿಮ್ಫೆರೊಪೋಲ್ ಎಂಬ ವಿಚಕ್ಷಣ ಹಡಗನ್ನು, ರಷ್ಯಾ ನೌಕಾಪಡೆ ಡ್ರೋನ್‌ ದಾಳಿ ನಡೆಸುವ ಮೂಲಕ ಹೊಡೆದುರುಳಿಸಿದೆ.

ಒಂದು ದಶಕದ ಅವಧಿಯಲ್ಲಿ ಉಕ್ರೇನ್‌ ತನ್ನ ನೌಕಾ ಭದ್ರತೆಗಾಗಿ ನಿಯೋಜಿಸಿದ್ದ ಅತಿದೊಡ್ಡ ಹಡಗು ಎಂಬ ಖ್ಯಾತಿ ಪಡೆದಿದ್ದ ಸಿಮ್ಫೆರೊಪೋಲ್, ಕ್ಷಣಾರ್ಧದಲ್ಲಿ ರಷ್ಯನ್‌ ಡ್ರೋನ್‌ ದಾಳಿಗೆ ಬಲಿಯಾಗಿದೆ.

ಈ ಕುರಿತು ಮಾಹಿತಿ ನೀಡಿರುವ ರಷ್ಯಾದ ರಕ್ಷಣಾ ಸಚಿವಾಲಯ “ನೌಕಾ ಡ್ರೋನ್‌ ದಾಳಿಯಲ್ಲಿ ಉಕ್ರೇನ್‌ನ ಅತಿದೊಡ್ಡ ವಿಚಕ್ಷಣಾ ಹಡಗನ್ನು ಹೊಡೆದುರುಳಿಸಲಾಗಿದೆ. ಇದು ರಷ್ಯನ್‌ ನೌಕಾಸೇನೆಗೆ ದೊರೆತ ಜಯ” ಎಂದು ಸ್ಪಷ್ಟಪಡಿಸಿದೆ.

ರೇಡಿಯೋ, ಎಲೆಕ್ಟ್ರಾನಿಕ್, ರಾಡಾರ್ ಮತ್ತು ಆಪ್ಟಿಕಲ್ ವಿಚಕ್ಷಣಕ್ಕಾಗಿ ವಿನ್ಯಾಸಗೊಳಿಸಲಾದ ಲಗುನಾ-ವರ್ಗದ, ಮಧ್ಯಮ ಗಾತ್ರದ ಈ ಹಡಗು, ಡ್ಯಾನ್ಯೂಬ್ ನದಿಯ ಡೆಲ್ಟಾದಲ್ಲಿ ರಷ್ಯನ್‌ ಡ್ರೋನ್‌ ದಾಳಿಗೆ ತುತ್ತಾಗಿದೆ. ದಾಳಿಯ ತೀವ್ರತೆ ಎಷ್ಟಿತ್ತೆಂದರೆ ಹಡಗಿನ ಒಂದು ಭಾಗ ಉಕ್ರೇನ್‌ನ ಒಡೆಸ್ಸಾ ಪ್ರದೇಶದಲ್ಲಿ ದೊರೆತಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ಹೇಳಿಕೆಯನ್ನು ಆಧರಿಸಿ ಮೂಲಗಳು ಖಚಿತಪಡಿಸಿವೆ.

ಈ ಕುರಿತು ಯುಎವಿ ತಜ್ಞರನ್ನು ಉಲ್ಲೇಖಿಸಿ ರಷ್ಯಾದ ಅಧಿಕೃತ ಸರ್ಕಾರಿ ಮಾಧ್ಯಮ ಸಂಸ್ಥೆ TASS ವರದಿ ಮಾಡಿದ್ದು, ಉಕ್ರೇನಿಯನ್ ನೌಕಾಪಡೆಯ ಹಡಗನ್ನು ಹೊಡೆದುರುಳಿಸಲು, ಸಮುದ್ರ ಡ್ರೋನ್‌ನ ಮೊದಲ ಯಶಸ್ವಿ ಬಳಕೆ ಇದಾಗಿದೆ ಎಂದು ಸ್ಪಷ್ಟಪಡಿಸಿದೆ.

ದಾಳಿ ಒಪ್ಪಿಕೊಂಡ ಉಕ್ರೇನ್‌
ಇನ್ನು ತನ್ನ ಅತಿದೊಡ್ಡ ವಿಚಕ್ಷಣಾ ಹಡಗಿನ ಮೇಲೆ ರಷ್ಯಾದ ಡ್ರೋನ್‌ ದಾಳಿ ಒಪ್ಪಿಕೊಂಡಿರುವ ಉಕ್ರೇನ್‌, ಘಟನೆಯಲ್ಲಿ ಓರ್ವ ಸಿಬ್ಬಂದಿ ಸಾವನ್ನಪ್ಪಿರುವುದಾಗಿ ಮಾಹಿತಿ ನೀಡಿದೆ. ಈ ಕುರಿತು ಉಕ್ರೇನ್‌ ನೌಕಾಪಡೆಯ ವಕ್ತಾರರ ಹೇಳಿಕೆಯನ್ನು ಉಲ್ಲೇಖಿಸಿ ಕೈವ್‌ ಇಂಡಿಪೆಂಡೆಂಟ್‌ ವರದಿ ಮಾಡಿದ್ದು, ದಾಳಿಯಲ್ಲಿ ಹಲವು ನೌಕಾ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಿದೆ.

2019ರಲ್ಲಿ ನಿರ್ಮಾಣವಾಗಿದ್ದ ಸಿಮ್ಫೆರೊಪೋಲ್ ವಿಚಕ್ಷಣಾ ಹಡಗನ್ನು, ಎರಡು ವರ್ಷಗಳ ಬಳಿಕ ಉಕ್ರೇನ್‌ ನೌಕಾಸೇನೆಗೆ ಸೇರಿಸಲಾಗಿತ್ತು. ಇದು ಉಕ್ರೇನ್‌ ನೌಕಾಪಡೆಯ ಅತಿದೊಡ್ಡ ಹಡಗು ಎಂಬ ಖ್ಯಾತಿ ಪಡೆದಿತ್ತು.

ಉಕ್ರೇನ್‌ ಮೇಲೆ ರಷ್ಯಾದ ಭೀಕರ ಡ್ರೋನ್‌ ದಾಳಿ ಮುಂದುವರೆದಿದ್ದು, ಪ್ರಮುಖ ನಗರಗಳು, ಹಡಗುಕಟ್ಟೆಗಳು ಮತ್ತು ವಾಯು ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ