ಹೊಸದಿಗಂತ ವರದಿ ಉತ್ತರ ಕನ್ನಡ:
ಐತಿಹಾಸಿಕ ಮಹತೋಭಾರ ಶ್ರೀ ಉಮಾಮಧುಕೇಶ್ವರ ದೇವಸ್ಥಾನದಲ್ಲಿನ ಶ್ರೀ ಉಮಾಮಧುಕೇಶ್ವರ ದೇವರ ಜಾತ್ರಾ ಮಹೋತ್ಸವ ಹಾಗೂ ವಾರ್ಷಿಕ ಮಹಾರಥೋತ್ಸವು ಸೋಮವಾರ ರಾತ್ರಿ ಭಕ್ತರ ಹರ್ಷೋದ್ಘಾರದ ನಡುವೆ ಸಡಗರ ಸಂಭ್ರಮದಿಂದ ನಡೆಯಿತು.
ಸೋಮವಾರ ಮುಂಜಾನೆ ಶ್ರೀ ಉಮಾಮಧುಕೇಶ್ವರ ದೇವರಿಗೆ ವಿಷೇಶ ಅಲಂಕಾರ, ಪೂಜೆ ನೆರವೇರಿಸಿ, ಬಲಿ, ಜಪ, ಹವನದ ಬಳಿಕ ಉಮಾ ಮಧುಕೇಶ್ವರ ದೇವರ ಉತ್ಸವ ಮೂರ್ತಿಗಳನ್ನು ಅಲಂಕೃತ ಪಲ್ಲಕ್ಕಿಯಲ್ಲಿಟ್ಟು ವಾದ್ಯ ಮೇಳದೊಂದಿಗೆ ಪಲ್ಲಕ್ಕಿ ಉತ್ಸವ ಮಾಡಲಾಯಿತು. ಮನ್ಮಹಾಸ್ಯಂದನ ರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ಶ್ರೀ ಉಮಾಮಧುಕೇಶ್ವರ ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಟಾಪನೆ ಮಾಡಲಾಯಿತು. ಪ್ರತಿಷ್ಟಾಪನೆಯ ನಂತರ ಭಕ್ತರ ದರ್ಶನಕ್ಕಾಗಿ ಅವಕಾಶ ನೀಡಲಾಯಿತು.
ಮುಂಜಾನೆಯಿಂದ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು, ಹೂ, ಹಣ್ಣು ಕಾಯಿ ಸಮರ್ಪಿಸಿ ಭಕ್ತಿ ಮೆರೆದರು. ರಾತ್ರಿ 12-30ರವರೆಗೆ 30 ಸಾವಿರಕ್ಕೂ ಅಧಿಕ ಭಕ್ತರು ದರ್ಶನ ಪಡೆದರು. ರಾತ್ರಿ 12-30ಕ್ಕೆ ಮಹಾಮಂಗಳಾರತಿ ನೆರವೇರಿದ ಬಳಿಕ ಭಕ್ತರ ಹರ್ಷೋದ್ಗಾರದ ನಡುವೆ ಶ್ರೀ ಉಮಾಮಧುಕೇಶ್ವರ ದೇವರ ಮನ್ಮಹಾಸ್ಯಂದನೋತ್ಸವ ಆರಂಭಗೊಂಡಿತು.
ಇದನ್ನೂ ಓದಿ:
ಬಣ್ಣ ಬಣ್ಣದ ಪತಾಕೆ, ಬೃಹತ್ ರುದ್ರಾಕ್ಷಿ ಮಾಲೆ, ವಿವಿಧ ಫಲ ಪುಷ್ಪ, ವಿದ್ಯುತ್ ದೀಪಗಳಿಂದ ಅಲಂಕರಿಸಿದ ಮಹಾರಥವನ್ನು ಭಕ್ತ ಸಮೂಹ ಹರಹರ ಮಹಾದೇವ ಎಂಬ ಜಯ ಘೋಷ ಮೊಳಗಿಸುತ್ತ ಎಳೆಯುತ್ತ ಸಾಗಿದರು. ವಿವಿಧ ವಾದ್ಯ ಮೇಳಗಳು ಮಹಾರಥೋತ್ಸವಕ್ಕೆ ಭಕ್ತಿಯ ಮೆರಗು ನೀಡಿತು.
ನೆರೆದಿದ್ದ ಸಾವಿರಾರು ಭಕ್ತರು ಹೂ, ಬಾಳೆಹಣ್ಣು ರಥಕ್ಕೆ ಎಸೆದು ಭಕ್ತಿ ಸಮರ್ಪಿಸಿದರು. ವಯಸ್ಕರು, ಪುರುಷರು, ಮಹಿಳೆಯರು, ಮಕ್ಕಳು ಜಾತಿ ಭೇದವನ್ನು ಮರೆತು ಜಾತ್ರೆಯ ಸಂಭ್ರಮದಲ್ಲಿ ಪಾಲ್ಗೊಂಡರು. ಸುಮಾರು 5 ಗಂಟೆಗಳ ಕಾಲ ಜರುಗಿದ ಮಹಾ ರಥೋತ್ಸವ ಮಂಗಳವಾರ ಮುಂಜಾನೆ 5ರ ಗಂಟೆಗೆ ಸಂಪನ್ನಗೊಂಡಿತು. ಬುಧವಾರ ಅವಭೃತ ತೀರ್ಥಸ್ನಾನದ ಬಳಿಕ ಕಳೆದ ಒಂದು ವಾರದಿಂದ ನಡೆಯುತ್ತಿರುವ ಜಾತ್ರಾ ಮಹೋತ್ಸವಕ್ಕೆ ತೆರೆ ಬಿಳಲಿದೆ.
ಬಿಗಿ ಪೊಲೀಸ್ ಬಂದೋಬಸ್ತ್:
ಬನವಾಸಿಯ ಐತಿಹಾಸಿಕ ಶ್ರೀ ಉಮಾ ಮಧುಕೇಶ್ವರ ದೇವರ ವಾರ್ಷಿಕ ಮಹಾ ರಥೋತ್ಸವದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು. ಡಿ.ವಾಯ್ ಎಸ್.ಪಿ ಗೀತಾ ಪಾಟೀಲ್, ಸಿಪಿಐ ಶಶಿಕಾಂತ್ ವರ್ಮ ಅವರ ಮಾರ್ಗದರ್ಶನದಲ್ಲಿ ಬನವಾಸಿ ಪೊಲೀಸ್ ಠಾಣೆಯ ಪಿಎಸ್ಐಗಳಾದ ಮಾಂತೇಶ ಕುಂಬಾರ, ರವೀಂದ್ರ ಬಿರಾದಾರ ನೇತೃತ್ವದಲ್ಲಿ ಬನವಾಸಿ ಪೊಲೀಸ್ ಠಾಣೆ ಹಾಗೂ ಬೇರೆ ಬೇರೆ ಠಾಣೆಗಳಿಂದ ಆಗಮಿಸಿದ ಪೊಲೀಸ್ ಇಲಾಖೆಯ ಪಿಎಸ್ಐಗಳು, ಆರಕ್ಷಕ ಸಿಬ್ಬಂದಿಗಳು ಮಹಾ ರಥೋತ್ಸವದಲ್ಲಿ ಸುಗಮ ವಾಹನ ಸಂಚಾರ ಹಾಗೂ ಶಾಂತಿ ಸುವ್ಯವಸ್ಥೆ ಕೈಗೊಂಡಿದ್ದರು.
ಕೆ.ಎಸ್.ಆರ್. ಟಿ.ಸಿ ಅಧಿಕಾರಿಗಳ ಬೇಜಾವಬ್ದಾರಿ:
ಇತಿಹಾಸ ಪ್ರಸಿದ್ಧ ಬನವಾಸಿಯ ಶ್ರೀ ಉಮಾ ಮಧುಕೇಶ್ವರ ದೇವರ ವಾರ್ಷಿಕ ಮಹಾ ರಥೋತ್ಸವವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಬೇರೆ ಬೇರೆ ಕಡೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಅದರೆ ಮಹಾರಥೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ಸರಿಯಾದ ಸಾರಿಗೆ ವ್ಯವಸ್ಥೆಯನ್ನು ಸಾರಿಗೆ ಇಲಾಖೆಯವರು ಕಲ್ಪಿಸದೇ ಜಾತ್ರೆ ಬಂದ ಭಕ್ತರು ಪರದಾಡುವ ಸ್ಥಿತಿ ಎದುರಾಯಿತು.
ಬೇರೆಬೇರೆ ಜಿಲ್ಲೆಯಿಂದ, ಸುತ್ತಮುತ್ತಲಿನ ಹಳ್ಳಿಗಳಿಂದ ಜಾತ್ರೆಗೆ ಬಂದ ಭಕ್ತರು ರಾತ್ರಿ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾದು ಕಾದು ಹೈರಾಣದರು. ರಾತ್ರಿ 8 ಗಂಟೆಯ ಬಳಿಕ ಕೆ.ಎಸ್.ಆರ್.ಟಿ.ಸಿ. ಇಲ್ಲದೇ ರಥೋತ್ಸವಕ್ಕೆ ಬಂದ ವಯಸ್ಕರು, ಮಹಿಳೆಯರು, ಮಕ್ಕಳನ್ನು ಹಿಡಿದು ಸಾರಿಗೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತ ಖಾಸಗಿ ಬಸ್, ಖಾಸಗಿ ವಾಹನ, ಆಟೋಗಳಲ್ಲಿ ದುಪ್ಪಟ್ಟು ಹಣ ನೀಡಿ ತೆರಳಬೇಕಾಯಿತು.



