Tuesday, September 23, 2025

ವಿಶ್ವಸಂಸ್ಥೆಯ ಸಾಮಾನ್ಯ ಸಭೆ! ಟ್ರಂಪ್ ಮನೆ ಬಾಗಿಲು ತಟ್ಟಿದ ಪಾಕ್ ಪ್ರಧಾನಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UNGA) ಈ ಬಾರಿ ಹೆಚ್ಚು ಗಮನ ಸೆಳೆದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಎರಡನೇ ಅವಧಿಯ ಮೊದಲ ಭಾಷಣ ಮಾಡಲು ಸಜ್ಜಾಗಿದ್ದಾರೆ. ಇದೇ ವೇಳೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅಮೆರಿಕ ಪ್ರವಾಸದಲ್ಲಿ ತೊಡಗಿರುವುದು ರಾಜಕೀಯ ಕುತೂಹಲ ಹೆಚ್ಚಿಸಿದೆ.

ಟ್ರಂಪ್ ತಮ್ಮ ಭಾಷಣದಲ್ಲಿ ಕಳೆದ ಎಂಟು ತಿಂಗಳಲ್ಲಿ ಸಾಧಿಸಿದ ಪ್ರಮುಖ ಕಾರ್ಯಗಳನ್ನು ಜಗತ್ತಿನ ಮುಂದೆ ಹಂಚಿಕೊಳ್ಳಲಿದ್ದಾರೆ. ವಿಶೇಷವಾಗಿ ಏಳು ಯುದ್ಧಗಳು ಮತ್ತು ಸಂಘರ್ಷಗಳನ್ನು ಕೊನೆಗೊಳಿಸಿರುವುದನ್ನು ಐತಿಹಾಸಿಕ ಸಾಧನೆ ಎಂದು ಅವರು ಪ್ರಸ್ತಾಪಿಸುವ ನಿರೀಕ್ಷೆ ಇದೆ. ಇದೇ ವೇಳೆ ಟ್ರಂಪ್ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮತ್ತು ಉಕ್ರೇನ್, ಅರ್ಜೆಂಟೀನಾ ಹಾಗೂ ಯುರೋಪಿಯನ್ ಒಕ್ಕೂಟದ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಕತಾರ್, ಸೌದಿ ಅರೇಬಿಯಾ, ಇಂಡೋನೇಷ್ಯಾ, ಟರ್ಕಿ, ಪಾಕಿಸ್ತಾನ, ಈಜಿಪ್ಟ್, ಯುಎಇ ಹಾಗೂ ಜೋರ್ಡಾನ್ ನಾಯಕರೊಂದಿಗೆ ಬಹುಪಕ್ಷೀಯ ಸಭೆಯೂ ನಿಗದಿಯಾಗಿದೆ.

ಹಾಗೆಯೇ ಟ್ರಂಪ್ ಹಾಗೂ ಶೆಹಬಾಜ್ ಷರೀಫ್ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರ ಭಾಷಣದಲ್ಲಿ ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸುವ ಸಾಧ್ಯತೆ ಹೆಚ್ಚು ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ತಿಳಿಸಿದೆ. ಆದರೆ ಭಾರತವು ಪಾಕ್ ಆಕ್ರಮಿತ ಕಾಶ್ಮೀರವನ್ನು ತನ್ನ ಅವಿಭಾಜ್ಯ ಭಾಗವೆಂದು ಪುನರುಚ್ಚರಿಸುತ್ತಾ ಬಂದಿದೆ.

ಇದೇ ಸಮಯದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೂಡ ಟ್ರಂಪ್ ಅವರನ್ನು ಭೇಟಿಯಾಗಲಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅವರು ಅಮೆರಿಕದಿಂದ ರಷ್ಯಾ ವಿರುದ್ಧ ಕಠಿಣ ನಿರ್ಬಂಧಗಳನ್ನು ಒತ್ತಾಯಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ