ಹೊಸದಿಗಂತ ವರದಿ,ವಿಜಯಪುರ:
ಸದಾಶಿವ ಆಯೋಗದ ವರದಿ ಆಧಾರಿತ ಅಸಂವಿಧಾನಿಕ ಒಳಮೀಸಲಾತಿ ಶಿಫಾರಸ್ಸು ಮಾಡಿರುವುದು ತೀವ್ರ ಖಂಡನೀಯ ಎಂದು ವಿಧಾನ ಪರಿಷತ್ ಸದಸ್ಯ, ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯಲ್ಲಿರುವ ಸಮಾನ ಅವಕಾಶ ವಂಚಿತ ಶೋಷಿತ ತಳ ಸಮುದಾಯಗಳ ಮರು ವರ್ಗೀಕರಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದರು.
ರಾಜ್ಯ ಸರ್ಕಾರ ಕೇವಲ ಜನಸಂಖ್ಯೆ ಆಧಾರದ ಮೇಲೆ ಪರಿಶಿಷ್ಟ ಜಾತಿ ಪಟ್ಟಿಯನ್ನು ತಿದ್ದಿ, ತೇಪೆಹಚ್ಚಿ, ಮರು ವರ್ಗೀಕರಿಸಿ 5 ಗುಂಪುಗಳನ್ನಾಗಿ ಮಾಡಿರುವುದು ಸರಿಯಲ್ಲ. ಮೀಸಲಾತಿ ಹಿಂದುಳಿದಿರುವಿಕೆ ಮಾನದಂಡವಾದ ಮೇಲೆ, ಒಳಮೀಸಲಾತಿಗೂ ಹಿಂದುಳಿದಿರುವಿಕೆಯೇ ಮಾನದಂಡವಾಗವಾಗಬೇಕೇ ಹೊರತು ಜನಸಂಖ್ಯೆಯಲ್ಲ. ಹೀಗಾಗಿ ಈ ವರ್ಗೀಕರಣ ಅಸಂವಿಧಾನಿಕವಾಗಿದೆ ಎಂದು ಆರೋಪಿಸಿದರು.
ಸಂವಿಧಾನ ಅನುಚ್ಛೇದ 17 ರಂತೆ ಈಗಾಗಲೇ ದೇಶಾದ್ಯಂತ ಅಸ್ಪೃಶ್ಯತೆ ಆಚರಣೆ ನಿಷಿದ್ಧವಾಗಿದ್ದರೂ ಸಹ ಸರ್ಕಾರ ಸ್ಪ್ರಶ್ಯ ಹಾಗೂ ಅಸ್ಪೃಶ್ಯ ಎಂಬ ಪರಿಕಲ್ಪನೆ ಅಡಿ ಒಳ ವರ್ಗೀಕರಣ ಮಾಡುತ್ತಿರುವುದು ಸಂವಿಧಾನದ ಸಮಾನತೆಯ ಆಶಯಕ್ಕೆ ವಿರುದ್ಧವಾಗಿದೆ. ಈ ಬೆಳವಣಿಗೆ ದೇಶಾದ್ಯಂತ ದಮನಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟುಗಳ ಐಕ್ಯತೆಯನ್ನು ನುಚ್ಚುನೂರು ಮಾಡಿ, ಪರಿಶಿಷ್ಟರ ಒಗ್ಗಟ್ಟನ್ನು ತುಂಡರಿಸಿ, ಬಿಜೆಪಿ ದಲಿತರನ್ನು ಒಡೆದಾಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ದೂರಿದರು.