ಹೊಸದಿಗಂತ ವರದಿ, ಹಾವೇರಿ (ಶಿಗ್ಗಾವಿ) :
ಇದು ದಬ್ಬಾಳಿಕೆಯ ಸರ್ಕಾರ, ಅನ್ಯಾಯದ ವಿರುದ್ದ ಧ್ವನಿ ಎತ್ತಿದವರ ವಿರುದ್ದ ಕೇಸ್ ಹಾಕಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರದ ವಿರುದ್ದ ಗುಡುಗಿದರು.
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ತಡಸ ಗ್ರಾಮದಲ್ಲಿ ಹುಬ್ಬಳ್ಳಿಯ ಬಿಜೆಪಿ ನಾಯಕರ ಮೇಲೆ ಕೇಸ್ ಹಾಕಿದ ವಿಚಾರ ಕುರಿತಂತೆ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ವ್ಯಕ್ತಿ ಸ್ವಾತಂತ್ರ್ಯ ಉಳಿದಿಲ್ಲ,ಪ್ರಜಾಪ್ರಭುತ್ವ ಉಳಿಯುತ್ತಿಲ್ಲ. ಅಘೋಷಿತ ತುರ್ತು ಪರಿಸ್ಥಿತಿ ಉಂಟಾಗಿದೆ ಎಂದು ದೂರಿದರು.
ಶ್ರೀಕಾಂತ್ ಪೂಜಾರಿ ಒಳಗಡೆ ಹಾಕಿರೋದಕ್ಕೆ ಅವರ ಮೇಲೆ ಕೇಸ್ ಗಳೇ ಇಲ್ಲ. ಯಾರ ಆದೇಶದ ಮೇಲೆ ಬಂಧನ ನಡೆದಿದೆ? ರಾಜಕೀಯ ದ್ವೇಷಕ್ಕೆ ಪೊಲೀಸ್ ಇಲಾಖೆಯನ್ನು ಬಳಕೆ ಮಾಡಿಕೊಂಡಿದ್ದಾರೆ. ಪೊಲೀಸ್ ಇಲಾಖೆ ದುರ್ಬಳಕೆ ಮಾಡಿಕೊಂಡು ಭಯ,ಅಶಾಂತಿ ಸೃಷ್ಟಿ ಮಾಡಿದ್ದಾರೆ ಇದು ದುರ್ದೈವದ ಸಂಗತಿ ಎಂದು ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು.
ಸಾಮರಸ್ಯ ಇರುವ ರಾಜ್ಯದಲ್ಲಿ ಓಟಿನ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಎಮರ್ಜೆನ್ಸಿ ಸೃಷ್ಟಿಯಾಗಿದೆ. ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ಕೇಸ್ ನಲ್ಲಿ ಅಮಾಯಕರನ್ನು ಕೈಬಿಡುವ ಡಿಕೆಶಿ ನಿಲುವು ಕುರಿತಂತೆ ಮಾತನಾಡಿ ಅಮಾಯಕರು ಅಂತ ತೀರ್ಮಾನ ಮಾಡುವವರು ಯಾರು ಎಂದು ಬೊಮ್ಮಾಯಿ ಪ್ರಶ್ನಿಸಿದರು.
ಅಂದು ಗಲಭೆ ನಡೆದಾಗ ಎರಡು ಪೊಲೀಸ್ ಸ್ಟೇಷನ್ ಗೆ ಬೆಂಕಿ ಹಚ್ಚಿದರು ಅಮಾಯಕರಾ? ಒಂದು ರೀತಿಯಲ್ಲಿ ಭಾರತದ ಸಾರ್ವಭೌಮತ್ವಕ್ಕೆ ಸವಾಲು ಎಸೆಯುವ ಶಕ್ತಿಗೆ ಅಮಾಯಕರು ಅಂತ ಕರಿತಾರಾ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಪೋಲೀಸರ ಆ್ಯಕ್ಷನ್ ಸರಿ ಇದೆ ಅಂತ ಕ್ಯಾಬಿನೇಟ್ ನಲ್ಲಿ ವರದಿ ಒಪ್ಪಿ , ಈಗ ಅಮಾಯಕರು ಇದಾರೆ ಅಂದರೆ ಹೇಗೆ? ಕಾಂಗ್ರೆಸ್ ನವರದ್ದು ದ್ವಂದ್ವ ಧೋರಣೆ ಇದೆ, ಇದು ಓಲೈಕೆ ರಾಜಕಾರಣ ಕೋರ್ಟ್ ತೀರ್ಮಾನ ಮಾಡಲಿ ಅಮಾಯಕರು ಅಂತ ಎಂದು ಬೊಮ್ಮಾಯಿ ಒತ್ತಾಯಿಸಿದರು.
ಡಿಜೆ ಹಳ್ಳಿ ಕೆಜಿ ಹಳ್ಳಿ ಕೇಸ್ ವೀಕ್ ಮಾಡುತ್ತಿದ್ದಾರೆ. ದುಷ್ಟ ಶಕ್ತಿಗೆ ಪಾರಾಗಲು ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಮ ಮಂದಿರ ಕ್ರೆಡಿಟ್ ಕೇವಲ ಮೋದಿಗೆ ಎಂಬ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ , ಬೇರೆಯವರು ಕ್ರೆಡಿಟ್ ತಗೊಳೋಕೆ ತಯಾರಿಲ್ಲ ನಾವೇನು ಮಾಡೋಣ ಎಂದು ಹಾಸ್ಯಮಾಡಿದರು.
ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ ಹೇಳಿಕೆ ಬಗ್ಗೆ ಅವರ ಗೃಹ ಸಚಿವರೇ ಹೇಳ್ತಿದ್ದಾರೆ. ಗೋದ್ರಾ ಮಾದರಿ ಗಲಾಟೆ ಆಗಲಿದೆ ಅಂತ ಹರಿಪ್ರಸಾದ್ ಹೇಳಿದಾರೆ. ಹರಿಪ್ರಸಾದ್ ಸಾಕ್ಷಿ ಸಮೇತ ಕೊಡಬೇಕಿತ್ತು. ಮೊದಲು ಹರಿ ಪ್ರಸಾದ್ ಮೇಲೆ ಸಮನ್ಸ್ ಜಾರಿ ಮಾಡಲಿ ಎಂದು ಬೊಮ್ಮಾಯಿ ಆಗ್ರಹಿಸಿದರು.