ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂಡರ್-19 ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತ ತನ್ನ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲವಾಯಿತು. ಬ್ಯಾಟಿಂಗ್ ಆಹ್ವಾನ ಪಡೆದ ಪಾಕ್ ಪಡೆ, ಆರಂಭಿಕ ಬ್ಯಾಟರ್ ಸಮೀರ್ ಮಿನ್ಹಾಸ್ ಬಾರಿಸಿದ ಅಮೋಘ ಶತಕದ ಬಲದಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 347 ರನ್ ಕಲೆಹಾಕಿತು.
ಆದ್ರೆಗುರಿ ಬೆನ್ನಟ್ಟಿದ ಭಾರತ 26.2 ಓವರ್‌ಗಳಲ್ಲಿ 156ರನ್‌ಗೆ ಸರ್ವಪತನ ಕಂಡಿತು.
ಚೇಸಿಂಗ್ ವೇಳೆ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ 26ರನ್ ಗಳಿಸಿದ ವೇಳೆ ವಿಕೆಟ್ ಕಳೆದುಕೊಂಡರು. ಅವರ ವಿಕೆಟ್ ಬೀಳುತ್ತಿದ್ದಂತೆ ಭಾರತದ ಪತನವೂ ಆರಂಭವಾಯಿತು. ನಾಯಕ ಆಯುಷ್ ಮ್ಹಾತ್ರೆ(2), ಆರನ್ ಜಾರ್ಜ್(16), ವಿಹಾನ್ ಮಲ್ಹೋತ್ರಾ(7, ವೇದಾಂತ್ ತ್ರಿವೇದಿ(9) ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು. ಇನ್ನೇನು 100ರೊಳಗೆ ತಂಡ ಗಂಟು ಮೂಟೆ ಕಟ್ಟುತ್ತದೆ ಎನ್ನುವಷ್ಟರಲ್ಲಿ 9ನೇ ಕ್ರಮಾಂಕದಲ್ಲಿ ಆಡಲಿಳಿದ ದೀಪೇಶ್ ದೇವೇಂದ್ರನ್ 16 ಎಸೆತಗಳಿಂದ 36 ರನ್ ಬಾರಿಸಿ ತಂಡದ ಮೊತ್ತವನ್ನು 100 ಗಡಿ ದಾಟಿಸಿದರು.
ಪಾಕ್ ಪರ ಘಾತಕ ಬೌಲಿಂಗ್ ದಾಳಿ ನಡೆಸಿದ ಅಲಿ ರಾಜಾ 4 ವಿಕೆಟ್ ಕಿತ್ತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಉಳಿದಂತೆ ಮೊಹಮ್ಮದ್ ಸಯ್ಯಾಮ್, ಅಬ್ದುಲ್ ಸುಭಾನ್ ಮತ್ತು ಹುಜೈಫಾ ಅಹ್ಸಾನ್ ತಲಾ ಎರಡು ವಿಕೆಟ್ ಕಿತ್ತರು.

