ಹೊಸದಿಗಂತ ವರದಿ, ಚಿತ್ರದುರ್ಗ:
ಕಾರಿನಲ್ಲಿ ದಾಖಲೆ ಇಲ್ಲದೆ ಹಣ ಸಾಗಿಸುತ್ತಿದ್ದನ್ನು ಪತ್ತೆ ಮಾಡಿರುವ ಹೊಳಲ್ಕೆರೆ ಪೊಲೀಸರು ಸುಮಾರು ೮ ಕೋಟಿ ನಗದು ಹಣ ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹೇಂದರ್ ಕುಮಾರ್ ಮೀನಾ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಬಳಿ ಬುಧವಾರ ತಡರಾತ್ರಿ ಬಿಳಿ ಬಣ್ಣದ ಇನೋವಾ ಕಾರಿನಲ್ಲಿ ಹಣ ಸಾಗಿಸಲಾಗುತ್ತಿತ್ತು. ಪೊಲೀಸರು ಕಾರನ್ನು ತಡೆದು ಪರಿಶೀಲಿಸಿದಾಗ ಕಾರಿನಲ್ಲಿದ್ದ ತಂಬಾಕು ಬ್ಯಾಗ್ಗಳಲ್ಲಿ ಹಣ ತುಂಬಿರುವುದು ಪತ್ತೆಯಾಗಿದೆ ಎಂದು ಹೇಳಿದರು.
ಕಾರಿನಲ್ಲಿದ್ದ ಹಣವನ್ನು ಜಪ್ತಿ ಮಾಡಿ, ಕಾರಿನ ಚಾಲಕ ಹೊಳಲ್ಕೆರೆ ತಾಲ್ಲೂಕು ತೇಕಲವಟ್ಟಿ ಗ್ರಾಮದ ಸಚಿನ್ ಹಾಗೂ ಹರೀಶ್ ಎಂಬವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಚಾಲಕ ಸಚಿನ್ ನೀಡಿರುವ ಹೇಳಿಕೆಯಂತೆ ಈ ಹಣ ಶಿವಮೊಗ್ಗದ ಮಲ್ನಾಡ್ ಟ್ರೇಡರ್ಸ್ನ ಸುರೇಶ್ ಎಂಬುವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಅಡಿಕೆ ಖರೀದಿಗಾಗಿ ಹಣ ನೀಡಿದ್ದರು. ಅಡಕೆ ಖರೀದಿ ಮಾಡದ ಕಾರಣ ಸುರೇಶ್ ಅವರಿಗೆ ಹಣ ವಾಪಾಸ್ ನೀಡಲಯ ಕೊಂಡೊಯ್ಯಲಾಗುತ್ತಿತ್ತು ಎಂದು ಮಾಹಿತಿ ನೀಡಿದ್ದಾರೆ ಎಂದು ಎಸ್ಪಿ ತಿಳಿಸಿದರು.
ಹೊಳಲ್ಕೆರೆ ಪೊಲೀಸರು ನೀಡುರುವ ಮಾಹಿತಿ ಪ್ರಕಾರ ೭,೯೯,೯೬,೦೦೦ ರೂ. ನಗದು ಹಣ ಇದೆ ಎಂದು ತಿಳಿದುಬಂದಿದೆ. ಈ ಕುರಿತು ಸೂಕ್ತ ದಾಖಲೆಗಳನ್ನು ಒದಗಿಸುವಂತೆ ಸುರೇಶ್ ಅವರಿಗೂ ನೋಟಿಸ್ ನೀಡಲಾಗಿದೆ. ೧೦ ಲಕ್ಷಕ್ಕೂ ಹೆಚ್ಚು ನಗದು ಹಣ ವಹಿವಾಟು ಮಾಡಿರುವ ಕಾರಣ ಆದಾಯ ತೆರಿಗೆ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಹಣದ ಮೂಲದ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಮಾಹಿತಿ ಪಡೆಯುವುದು ಬಾಕಿ ಇದೆ. ಪೂರ್ಣ ಮಾಹಿತಿ ಪಡೆದ ನಂತರ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗುವುದು ಎಂದು ಹೇಳಿದರು.