ನನಸಾಗದ ಐಎಎಸ್ ಕನಸು, ಬ್ಯಾಂಕ್ ಮ್ಯಾನೇಜರ್ ಆತ್ಮಹತ್ಯೆ

ಹೊಸದಿಗಂತ ವರದಿ ಮಂಡ್ಯ :

ಐಎಎಸ್ ಓದಬೇಕೆಂಬ ಕನಸು ನನಸಾಗದ ಹಿನ್ನೆಲೆ ಮತ್ತು ಜೀವನದಲ್ಲಿನ ಜಿಗುಪ್ಸೆ ಯಿಂದ ಬೇಸತ್ತು ಬ್ಯಾಂಕ್ ಮ್ಯಾನೇಜರ್ ನೇಣಿಗೆ ಶರಣಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಕಾವೇರಿ ಗ್ರಾಮೀಣ ಬ್ಯಾಂಕ್ ನ ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕಿ ಶೃತಿ (30) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿನಾಯಕ ಬಡಾವಣೆಯ ಬಾಡಿಗೆ ಮನೆಯಲ್ಲಿ ಅವರು ನೇಣು ಬಿಗಿದುಕೊಂಡಿದ್ದು, ಐಎಎಸ್ ಕನಸು ಮತ್ತು ಜೀವನದ ವೈಫಲ್ಯ ಸಾವಿಗೆ ಕಾರಣ ಎಂದು ಮರಣ ಪೂರ್ವ ಪತ್ರದಲ್ಲಿ ತಿಳಿಸಿದ್ದಾರೆ.
ಕೊಳ್ಳೇಗಾಲದ ಮಲ್ಲಪ್ಪರ ಪುತ್ರಿಯಾದ ಶೃತಿ ಕಾವೇರಿ ಗ್ರಾಮೀಣ ಬ್ಯಾಂಕ್ ನ ಉದ್ಯೋಗಿಯಾಗಿ ನೇಮಕ ಗೊಂಡು ಚಿಕ್ಕಮಗಳೂರಿನ ಶಾಖೆಯಲ್ಲಿ ಕಳೆದ ಏಳು ವರ್ಷ ಕಾರ್ಯನಿರ್ವಹಿಸಿ ಮಂಡ್ಯದ ಪ್ರಾದೇಶಿಕ ಕಚೇರಿಗೆ ಎರಡು ತಿಂಗಳ ಹಿಂದೆ ಬಂದಿದ್ದರು.

ವಿನಾಯಕ ಬಡಾವಣೆಯ ರಾಜಣ್ಣರ ಮನೆಯನ್ನು ಬಾಡಿಗೆಗೆ ಪಡೆದು ಅವಿವಾಹಿತರಾಗಿದ್ದ ಹಿನ್ನೆಲೆಯಲ್ಲಿ ಒಬ್ಬರೆ ವಾಸವಾಗಿದ್ದರು. ಭಾನುವಾರ ರಾತ್ರಿ ಏಳರ ಸಮಯದಲ್ಲಿ ತಂದೆ ಮಲ್ಲಪ್ಪರಿಗೆ ಕರೆ ಮಾಡಿದ ಶೃತಿ ನಾನು ದೇವರ ಬಳಿ ಹೋಗುತ್ತಿದ್ದೇನೆ, ನನ್ನನ್ನು ಕ್ಷಮಿಸಿ ಎಂದು ಹೇಳಿ ಕರೆ ಕಡಿತ ಮಾಡಿದ್ದಾರೆ, ತಕ್ಷಣ ಮತ್ತೆ ಅವರು ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದ್ದು,ಮಂಡ್ಯದಲ್ಲಿರುವ ಸಂಬಂಧಿಕರಿಗೆ ಮಲ್ಲಪ್ಪ ವಿಚಾರ ತಿಳಿಸಿದ್ದು. ಮನೆಯ ಬಳಿ ಹೋಗಿ ನೋಡಿದಾಗ ಅಷ್ಟರಲ್ಲಿ ನೇಣು ಬಿಗಿದುಕೊಂಡಿದ್ದರು.

ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಬರೆದಿರುವ ಶೃತಿ ಐಎಎಸ್ ಮಾಡಬೇಕೆಂಬ ಕನಸು ನನಸಾಗಲಿಲ್ಲ, ಜೊತೆಗೆ ಜೀವನದಲ್ಲಿಯೂ ವೈಫಲ್ಯ ಕಂಡಿದ್ದೇನೆ ಎಂದು ತಿಳಿಸಿದ್ದಾರೆ. ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿ ಮೃತ ದೇಹವನ್ನು ಮಿಮ್ಸ್ ಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here