ಹೊಸದಿಗಂತ ವರದಿ ಹಾವೇರಿ:
ಬಂಕಾಪುರ ಪಟ್ಟಣದ ಹೊರವಲಯದ ರಸ್ತೆ ಬದಿ, ಬೈಕ್ ನ ಪಕ್ಕದಲ್ಲೇ ರಕ್ತಸಿಕ್ತವಾಗಿ ಬಿದ್ದ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಮುಂಡಗೋಡ ತಾಲೂಕಿನ ಕಾತೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಡಸಾಲಿ ಗ್ರಾಮದ ಮಂಜುನಾಥ ಜಾಧವ್ ಎಂದು ಗುರುತಿಸಲಾಗಿದೆ.
KA 31 E F 3587 ಪಲ್ಸರ್ ಬೈಕ್ ನ ಪಕ್ಕದಲ್ಲೇ ರಕ್ತಸಿಕ್ತವಾಗಿ ಶವ ಬಿದ್ದಿತ್ತು.ಈ ಘಟನೆ ಬೈಕ್ ಅಪಘಾತದಿಂದ ಆಗಿದೆಯೋ ಅಥವಾ ಯಾರಾದರು ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದಾರೆಯೇ ..? ಎನ್ನುವ ಅನುಮಾನ ಜನರಲ್ಲಿ ಶುರುವಾಗಿದೆ.
ಬಂಕಾಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ತನಿಖೆಯಿಂದ ಆತ ಬೈಕ್ ಅಪಘಾತದಲ್ಲಿ ಸಾವು ಕಂಡನೋ ಅಥವಾ ಕೊಲೆ ಮಾಡಲಾಗಿದೆಯೋ ಎಂದು ತಿಳಿದು ಬರಬೇಕಿದೆ.