Tuesday, November 25, 2025

ಅಪರಿಚಿತ ಪಾದಚಾರಿಗೆ ವಾಹನ ಡಿಕ್ಕಿ, ಸ್ಥಳದಲ್ಲೇ ದಾರುಣ ಸಾವು

ಹೊಸದಿಗಂತ ಮಡಿಕೇರಿ:

ಗೋಣಿಕೊಪ್ಪದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗೋಣಿಕೊಪ್ಪಲು-ವಿರಾಜಪೇಟೆ ಮುಖ್ಯ ರಸ್ತೆಯ ಕೈಕೇರಿ ಸಮೀಪ ಈ ದುರ್ಘಟನೆ ನಡೆದಿದೆ. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸುಮಾರು 55 ವರ್ಷ ಪ್ರಾಯದ ಪಾದಚಾರಿಗೆ ವೇಗವಾಗಿ ಬಂದ ಅನಾಮಧೇಯ ವಾಹನ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಪಾದಚಾರಿಯ ತಲೆ ಮತ್ತು ಎದೆ ಭಾಗಕ್ಕೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಗೋಣಿಕೊಪ್ಪಲು ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದಾರೆ.

ಮೃತ ವ್ಯಕ್ತಿ ಕೂಲಿ ಕಾರ್ಮಿಕರಾಗಿರಬಹುದು ಎಂದು ಅಂದಾಜಿಸಲಾಗಿದೆ. ಅಪಘಾತವೆಸಗಿದ ವಾಹನ ಸವಾರ ಸ್ಥಳದಿಂದ ಪರಾರಿಯಾಗಿದ್ದು, ಗೋಣಿಕೊಪ್ಪಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಸಹಾಯಕ್ಕಾಗಿ ಮನವಿ: ಮೃತರ ಗುರುತು ಪತ್ತೆ ಹಚ್ಚಲು ಮತ್ತು ಅವರ ಕುಟುಂಬಸ್ಥರನ್ನು ಪತ್ತೆ ಮಾಡಲು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮೃತರ ಪರಿಚಯವಿರುವವರು ಅಥವಾ ಕುಟುಂಬಸ್ಥರು ಕೂಡಲೇ ಗೋಣಿಕೊಪ್ಪಲು ಪೊಲೀಸ್ ಠಾಣೆ ಅಥವಾ ಗೋಣಿಕೊಪ್ಪಲು ಆಸ್ಪತ್ರೆಯನ್ನು ಸಂಪರ್ಕಿಸಲು ಕೋರಲಾಗಿದೆ.

error: Content is protected !!